
25ನೇ ವಯಸ್ಸಿಗೆ ಕರ್ನಾಟಕ ಹೈಕೋರ್ಟ್ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಬಂಗಾರಪೇಟೆಯ ಎನ್. ಗಾಯತ್ರಿ
ಕೋಲಾರ: ಬಡತನದಲ್ಲೇ ಬೆಳೆದ ಕೋಲಾರದ ಬಂಗಾರಪೇಟೆಯ ಎನ್. ಗಾಯತ್ರಿ ಅವರು ಕರ್ನಾಟಕ ಹೈಕೋರ್ಟ್ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿ, ಸತತ ಪ್ರಯತ್ನದ ಮೂಲಕ ತನ್ನ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಹೈಕೋರ್ಟ್ ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಇದರ ಫಲಿತಾಂಶ ಹೊರಬಿದ್ದಿದ್ದು, ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ. ಗಾಯತ್ರಿರವರು ಬಂಗಾರಪೇಟೆಯ ನಾರಾಯಣಸ್ವಾಮಿ ವೆಂಕಟಲಕ್ಷ್ಮಿರವರ ಒಬ್ಬಳೇ ಮಗಳಾಗಿದ್ದಾರೆ.
ತಳ ಸಮುದಾಯದಿಂದ ಬಂದ ಗಾಯತ್ರಿ, ಬಡತನದಲ್ಲೇ ಬೆಳೆದು ಬಂಗಾರಪೇಟೆಯ ಕಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿ, ಬಾಲಕಿಯರ ಪ್ರೌಢಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದರು. ಇಲ್ಲಿನ ಕೆಜಿಎಫ್‌ನ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡ ಅವರು ಕಾನೂನು ಪದವಿಯಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದರು.