ಫೇಸ್‌ಬುಕ್‌ನಲ್ಲಿ ಮೋಸ ಹೋದ ಮಹಿಳೆ; ಕಳೆದುಕೊಂಡ ಹಣವೆಷ್ಟು ಗೊತ್ತೇ? ಕೇಳಿದ್ರೆ ನೀವು ಶಾಕ್ ಆಗ್ತೀರಾ...!
ಥಾಣೆ: ಸೋಶಿಯಲ್ ಮೀಡಿಯಾದಲ್ಲಿ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲೊಬ್ಬಳು ಮಹಿಳೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 22.67 ಲಕ್ಷ ರೂಪಾಯಿ ನೀಡಿ ಮೋಸ ಹೊಗಿದ್ದಾಳೆ.
ಫೇಸ್‌ಬುಕ್‌ನಲ್ಲಿ ಫ್ರೆಂಡ್ ಆಗಿದ್ದ ವ್ಯಕ್ತಿಯೊಬ್ಬ ತನಗೆ 22.67 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಮುಂಬೈ ಥಾಣೆಯ 36 ವರ್ಷದ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಥಾಣೆಯಲ್ಲಿ ಆನ್‌ಲೈನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ, ಫೆಬ್ರವರಿ 2022 ರಲ್ಲಿ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿ, ಆನ್‌ಲೈನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದರು. ದಿನಕಳೆದಂತೆ ಈ ವ್ಯಕ್ತಿ ತನ್ನ ತಾಯಿಯ ಚಿಕಿತ್ಸೆಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿ, ಮಹಿಳೆಯಿಂದ 7,25,000 ರೂಪಾಯಿ ಹಣ ಮತ್ತು 15,42,688 ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ಪಡೆದುಕೊಂಡಿದ್ದಾನೆ. ಅದನ್ನು ವಾಪಸ್ ನೀಡುವಂತೆ ಮಹಿಳೆ ಕೇಳಿದಾಗ ಆ ವ್ಯಕ್ತಿ ಮಹಿಳೆಯಿಂದ ದೂರವಾಗಿದ್ದಾನೆ. ಈ ಬಗ್ಗೆ ಈಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.