
ಪಂಚಮಸಾಲಿ-ಒಕ್ಕಲಿಗ ಸಮುದಾಯಕ್ಕೆ ರಾಜ್ಯ ಸರ್ಕಾರ ನೀಡಿದ್ದ ಹೊಸ ಮೀಸಲಾತಿಗೆ ಹೈಕೋರ್ಟ್ ತಡೆ! ಯಥಾಸ್ಥಿತಿಗೆ ಆದೇಶ
ಬೆಂಗಳೂರು(Headlineskannada): ಲಿಂಗಾಯತ ಪಂಚಮಸಾಲಿಗೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ರಾಜ್ಯ ಸರ್ಕಾರ ನೀಡಿರುವ 2 ಸಿ, 2 ಡಿ ಮೀಸಲಾತಿಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಪಂಚಮಸಾಲಿ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಡಿ ಮತ್ತು ಒಕ್ಕಲಿಗರಿಗೆ 2ಸಿ ಮೀಸಲಾತಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಇತ್ತೀಚಿಗೆ ಒಪ್ಪಿಗೆ ನೀಡಿ ಘೋಷಣೆ ಮಾಡಿತ್ತು.
ಒಕ್ಕಲಿಗ ಮತ್ತು ಲಿಂಗಾಯತ ಪಂಚಮಸಾಲಿಗೆ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚಿಸಿ ಆದೇಶ ಹೊರಡಿಸಿದೆ.
ಬೊಮ್ಮಾಯಿ ಸಂಪುಟದ ತೀರ್ಮಾನ ಪ್ರಶ್ನಿಸಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಂತೆ ರಾಘವೇಂದ್ರ ಡಿ.ಜಿ.ಎನ್ನುವರು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಅರ್ಜಿದಾರ ರಾಘವೇಂದ್ರ ಡಿ.ಜಿ. ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಹೊಸ ಮೀಸಲಾತಿಗೆ ತಡೆ ಕೋರಿ ಮನವಿ ಮಾಡಿದರು. ಬಳಿಕ ಕೋರ್ಟ್, ಕಾಲಾವಕಾಶದ ಕೊರತೆ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಣೆ ಜ.30 ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ.