
ರನ್‌ವೇ ಸಿದ್ಧವಾಗಿದ್ದು ಹೊಸ ಹೊಸ ಕೌಶಲ್ಯಗಳನ್ನು ಕಲಿತು ಟೇಕಾಫ್ ಆಗಿ: ಹುಬ್ಬಳ್ಳಿಯ ರಾಷ್ಟ್ರೀಯ ಯುವಜನೋತ್ಸವದಲ್ಲಿ ಯುವಜನತೆಗೆ ಪ್ರಧಾನಿ ಮೋದಿ ಕರೆ
Thursday, January 12, 2023
ಹುಬ್ಬಳ್ಳಿ(Headlineskannada): ಹಲವು ಜಾಗತಿಕ ಉದ್ಯಮಗಳು ಭಾರತದತ್ತ ನೋಡುತ್ತಿದ್ದು, ಈ ಕಾರಣದಿಂದ ರನ್‌ವೇ ಸಿದ್ದವಾಗಿದೆ. ಭಾರತದ ಯುವ ಪೀಳಿಗೆ ಹೊಸ ಹೊಸ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್ ಆಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಇಲ್ಲಿನ ರೈಲ್ವೇ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಕಳೆದ 8 ವರ್ಷಗಳಲ್ಲಿ ಸರಕಾರದಿಂದ ಯುವಕರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಒಳ್ಳೆಯ ಕಾಲ. ಟೇಕಾಫ್ ಆಗಲು ನೀವು ರೆಡಿ ಆಗಿ ಎಂದರು.
ಭಾರತ ಒಂದು ಯುವ ದೇಶವಾಗಿದ್ದು, ಯುವಕರ ದೊಡ್ಡ ಪಡೆ, ಯುವ ಶಕ್ತಿ ನಮ್ಮಲ್ಲಿದೆ. ದೇಶದ ಬೆಳವಣಿಗೆಗೆ ಯುವ ಶಕ್ತಿ ಅಡಿಪಾಯವಾಗಲಿದೆ ಎಂದ ಮೋದಿ, ಯುವ ಶಕ್ತಿಯಿಂದಾಗಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಈ ಕಾರಣದಿಂದಲೇ ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು.