ಜನಾರ್ದನ ರೆಡ್ಡಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರಕಾರ; ಆಸ್ತಿ ಜಪ್ತಿಗೆ ಅನುಮತಿ
ಬೆಂಗಳೂರು(Headlineskannada): ರಾಜ್ಯದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ, ಬಿಜೆಪಿಗೆ ಠಕ್ಕರ್ ನೀಡಲು ಮುಂದಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ರಾಜ್ಯ ಬಿಜೆಪಿ ಸರ್ಕಾರ ಶಾಕ್ ಕೊಟ್ಟಿದೆ.
ರೆಡ್ಡಿಯ ಆಸ್ತಿ ಜಪ್ತಿಗೆ ಬಿಜೆಪಿ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಅಕ್ರಮ ಗಣಿಗಾರಿಕೆ ಹಣದಿಂದ ಜನಾರ್ದನ ರೆಡ್ಡಿ ಹೊಸದಾಗಿ ತೆಲಂಗಾಣ ರಾಜ್ಯಗಳಲ್ಲಿ 219 ಕಡೆ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಆಸ್ತಿಗಳನ್ನು ಜಪ್ತಿ ಮಾಡಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ 2022ರ ಆಗಸ್ಟ್ 30 ರಂದು CBI ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿತ್ತು.
ಈಗ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಸ್ತಿ ಜಪ್ತಿ ಮಾಡಲು ಅನುಮತಿ ನೀಡಿದೆ.
ಜನಾರ್ದನ ರೆಡ್ಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡದ ರಾಜ್ಯ ಸರ್ಕಾರವನ್ನು ಕಳೆದ ಮಂಗಳವಾರ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಗೃಹ ಇಲಾಖೆ, CBIಗೆ ಅನುಮತಿ ನೀಡಿ ಆದೇಶ ನೀಡಿದೆ.
ಗುರುವಾರ ಈ ಕುರಿತು ಹೈಕೋರ್ಟ್ ಗೆ ಮಾಹಿತಿ ನೀಡಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರವು ಗೃಹ ಇಲಾಖೆಯಿಂದ ಸಿಬಿಐಗೆ ಅನುಮತಿ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.
ತಕ್ಷಣವೇ CBI ತನ್ನ ಪ್ರಕ್ರಿಯೆ ಮುಂದುವರಿಸಬೇಕು ಹಾಗು ರೆಡ್ಡಿ ಅವರ ಆಪ್ತಿ ಜಪ್ತಿಗೆ ಕ್ರಮ ತೆಗೆದುಕೊಳ್ಳಿ ಎಂದು ಈ ವೇಳೆ ಹೈಕೋರ್ಟ್ ಸಿಬಿಐಗೆ ಆದೇಶಿಸಿದೆ.