
ಪಂಚಮಸಾಲಿ ಸಮುದಾಯಕ್ಕೆ ಸರಕಾರ ನೀಡಿರುವ 2ಡಿ ಮೀಸಲಾತಿ ತಿರಸ್ಕರಿಸಿದ್ದೇವೆ: ಜಯಮೃತ್ಯುಂಜಯ ಸ್ವಾಮೀಜಿ ಸರಕಾರಕ್ಕೆ ಕೊಟ್ಟ ಎಚ್ಚರಿಕೆ ಏನು..?
ಬೆಳಗಾವಿ(Headlines Kannada): ರಾಜ್ಯ ಸರಕಾರ ಪಂಚಮಸಾಲಿ ಸಮುದಾಯಕ್ಕೆ ನೀಡಿದ 2ಡಿ ಮೀಸಲಾತಿಯನ್ನು ನಾವು ತಿರಸ್ಕಾರ ಮಾಡುತ್ತಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಗುರುವಾರ ಹೇಳಿದ್ದಾರೆ.
ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ನಡೆಸಿಕೊಂಡು ಬಂದಿರುವ ಹೋರಾಟದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿಯನ್ನು ನೀಡಿತ್ತು.
ಗುರುವಾರ ಬೆಳಗಾವಿಯಲ್ಲಿ 2ಡಿ ಮೀಸಲಾತಿ ವಿಚಾರವಾಗಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಮುಂದಿನ 24 ಗಂಟೆಯಲ್ಲಿ ಸಿಎಂ ಬೊಮ್ಮಾಯಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕು. ನಮಗೆ ನೀಡುತ್ತೀರೋ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿ ಹೇಳಬೇಕು ಎಂದರು.
ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ ಎಂದು ಇಡೀ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. CM ಬೊಮ್ಮಾಯಿ ಮಾತಿಗೆ ಗೌರವ ಕೊಟ್ಟು ನಾವು ಹೋರಾಟವನ್ನು ತಾತ್ಕಾಲಿಕ ಸ್ಥಗಿತ ಮಾಡಿದ್ದೇವು. 2ಡಿ ಮೀಸಲಾತಿಯಿಂದ ನಮ್ಮ ಸಮುದಾಯದ ಜನ ಹಾಗು ಆಡಳಿತ ಪಕ್ಷದ ಯಾವುದೇ ಶಾಸಕರು ಸಮಾಧಾನಗೊಂಡಿಲ್ಲ ಎಂದ ಸ್ವಾಮೀಜಿ, ಜನವರಿ 12ರೊಳಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಇಲ್ಲವಾದರೆ ಸರಕಾರದ ವಿರುದ್ಧ ಜನವರಿ 13ರಂದು ಶಿಗ್ಗಾಂವಿಯಲ್ಲಿ 30 ಸಾವಿರ ಜನ ಸೇರಿಸಿ ಹೋರಾಟ ಮಾಡುತ್ತೇವೆ. ಇದರಿಂದ 2023ರ ಚುನಾವಣೆಯಲ್ಲಿ ಗಂ#ಭೀರವಾದ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು.