ಬೇಲಿಯಲ್ಲಿ ಅರಳಿದ ಕುಸುಮ...
Tuesday, January 24, 2023
ಕಾಡಲಿಲ್ಲ ಯಾರನ್ನೂ ಆಸರೆಯ ಸೆರಗಿಗಾಗಿ,
ಬೇಡಲಿಲ್ಲ ಯಾರಲ್ಲೂ ರಕ್ಷಣೆಯ
ಕವಚಕ್ಕಾಗಿ,
ಕೊರಗಲಿಲ್ಲ ಅಂಗಳದ ಸಖಿಯ
ಸಂಭ್ರಮಕೆ,
ನರಳಲಿಲ್ಲ,ಅರಳಿದೆ ಬೇಲಿಯೊಳಗೆ
ತಲೆ ಎತ್ತಿ ಗಗನಕೆ...
ಬೇಡಲಿಲ್ಲ ಯಾರಲ್ಲೂ ರಕ್ಷಣೆಯ
ಕವಚಕ್ಕಾಗಿ,
ಕೊರಗಲಿಲ್ಲ ಅಂಗಳದ ಸಖಿಯ
ಸಂಭ್ರಮಕೆ,
ನರಳಲಿಲ್ಲ,ಅರಳಿದೆ ಬೇಲಿಯೊಳಗೆ
ತಲೆ ಎತ್ತಿ ಗಗನಕೆ...
ಮಧುಕರನ ಒಲವಧಾರೆಗೆ ಜೇನಾಗಿಹೆ ನಾನು,
ಬಣ್ಣದ ಚಿಟ್ಟೆಗಳ ಸಡಗರದಲಿ
ನಾ ಕಾಮಧೇನು,
ಪುಟ್ಟ ಹಕ್ಕಿಗಳ ರೆಕ್ಕೆಯ ಸ್ಪರ್ಶವು
ರೋಮಾಂಚನ,
ಚಿಗುರೆಲೆಗಳ ತುಸು ನಗುವದು
ಪ್ರೀತಿಯ ಸಿಂಚನ...
ಕಿತ್ತು ಬಿಡುವರೆಂಬ ಭಯವಿಲ್ಲೆನಗೆ
ಕಿಂಚಿತ್ತು,
ನೀರೆರೆದು ಕಾಪಿಡದಿರೆ ಇಲ್ಲೆನಗೆ
ಆಪತ್ತು,
ಇಬ್ಬನಿಯ ತಂಪಿನಲಿ ಹಗಲಿಡಿ
ನಗುತಿಹೆನು,
ಬಾನ ರವಿಯು ಇಳಿಯುತಿರೆ
ಭೂಮಾತೆಯ ಅಪ್ಪುವೆನು...
ಅರಳುವೆನು ದಿನವಿಡೀ ಪರಿಮಳವ
ಬೀರುತಲಿ,
ಬೇಲಿ,ವನ,ಅಂಗಳ ಎಲ್ಲಾದರೇನು?
ನಗಬೇಕು, ಕ್ಷಣಿಕ ಬದುಕಿದು
ಬಾನಂಗಳವನೇರುತಲಿ,
ಚುಕ್ಕಿ, ಮೋಡ,ಚಂದ್ರಮರು
ಕೈಬಿಡುವರೇನು?
ಉಷಾ.ಎಂ |