ದತ್ತಮಾಲೆ, ಶಾಲು, ಕುಂಕುಮ ಇಡುವುದರಿಂದ ಅದೇನು ಜಾಮೀನು, ಹಣ, ಜೀವನ ಕೊಡುತ್ತೇನ್ರೀ..?: ಶಾಸಕ ಟಿ.ಡಿ.ರಾಜೇಗೌಡರದ್ದೆನ್ನಲಾದ ಆಡಿಯೋ ವೈರಲ್
ಚಿಕ್ಕಮಗಳೂರು: ಕೇಸರಿ ಶಾಲು, ಕುಂಕುಮ, ದತ್ತಮಾಲೆ ಹಾಕಿದರೆ ಹೊಟ್ಟೆ ತುಂಬಲ್ಲ, ದತ್ತಪೀಠದ ಹೋರಾಟದಿಂದ ಅನ್ನ ಸಿಗುವುದಿಲ್ಲ ಎಂದು ಕಿಡಿಕಾರಿರುವ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರದ್ದೆನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಈ ಆಡಿಯೋದಲ್ಲಿ ಸಂಘಪರಿವಾರದ ಸಂಘಟನೆಗಳ ವಿರುದ್ಧ ಹರಿಹಾಯ್ದಿದ್ದು, ಅವರು ಮನೆ ಹಾಳು ಮಕ್ಕಳು. ಜನರಿಗೆ ದತ್ತಮಾಲೆ ಹಾಕಿಸಿ, ಕುಂಕುಮವನ್ನು ಹಾಕಿ ಕರೆದುಕೊಂಡು ಹೋಗಿ ಜನರನ್ನು ಹಾಳು ಮಾಡುತ್ತಿದ್ದಾರೆ. ಇವರು ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬ#ಲಿ ಕೊಟ್ಟರು. ಬಾಬ್ರಿ ಮಸೀದಿ ಕೆ#ಡವಲು ಹೋಗಿ ಇವರಿಂದಾಗಿ ಲಕ್ಷಾಂತರ ಜನರು ಬ#ಲಿಯಾದ್ರು. ನಾನು ಬೈಯುತ್ತೇನೆ, ಜನರನ್ನ ಕರೆದುಕೊಂಡು ಹೋಗುವವರು ಮನೆಹಾಳರು ಎಂದು ಶಾಸಕ ಟಿ.ಡಿ.ರಾಜೇಗೌಡರದ್ದೆನ್ನಲಾದ ಆಡಿಯೋ ವೈರಲ್ ಆಗಿದೆ.
ದತ್ತಪೀಠ ಹಿಂದೂ-ಮುಸಲ್ಮಾನರ ಭಾವೈಕ್ಯತಾ ಕೇಂದ್ರ ಅದು. ಅಲ್ಲಿ ಮುಸಲ್ಮಾನರೂ ಪೂಜೆ ಮಾಡುತ್ತಿದ್ದಾರೆ. ಆದರೆ ಸಂಘಪರಿವಾರದವರು ಶಾಲು ಹಾಕುವುದು, ಕುಂಕುಮ ಇಡುವುದು, ಅದೇ ಜಾಮೀನು ಕೊಡುತ್ತೆ, ಅದೇ ರಸ್ತೆ ಕೊಡುತ್ತೆ, ಹಣ ಕೊಡುತ್ತೆ, ಜೀವನ ಕೊಡುತ್ತೇನ್ರೀ ಎಂದು ಕೇಳುವ ಆಡಿಯೋ ವೈರಲ್ ಆಗಿದೆ.
ಈ ಆಡಿಯೋ ವೈರಲ್ಈ ಆಗುತ್ತಿದ್ದಂತೆಯೇ ಸಂಘಪರಿವಾರದ ಸಂಘಟನೆಗಳು ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಆಕ್ರೋಶ ಹೊರ ಹಾಕಿವೆ. ಟಿ.ಡಿ.ರಾಜೇಗೌಡ ಹೇಳಿಕೆ ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಈ ಆಡಿಯೋವನ್ನೇ ಹಿಡಿದುಕೊಂಡು ಮತ್ತಷ್ಟು ಪ್ರತಿಭಟಿಎಂಗಳಾಗುವ ಸಾಧ್ಯತೆ ಇದೆ.