ಬೀಡಿ ಕಟ್ಟಿ ಶಾಲೆ ಕಲಿತ ಕೇರಳದ ವ್ಯಕ್ತಿ ಈಗ ಅಮೆರಿಕದಲ್ಲಿ ನ್ಯಾಯಾಧೀಶರಾಗಿ ನೇಮಕ
ನಮ್ಮಲ್ಲಿ, ಛಲ, ಸಾಧಿಸುವ ಮನಸ್ಸಿದ್ದರೆ ಏನನ್ನು ಕೂಡ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಅಮೆರಿಕದ ಟೆಕ್ಸಾಸ್ನಲ್ಲಿ ಭಾರತೀಯ ಮೂಲದ ವಕೀಲ ಸುರೇಂದ್ರನ್ ಕೆ ಪಟ್ಟೆಲ್ ಇದೀಗ ನ್ಯಾಯಾಧೀಶರಾಗಿದ್ದಾರೆ. ಜನವರಿ 1 ರಂದು ಸುರೇಂದ್ರನ್ ಟೆಕ್ಸಾಸ್ನ ಫೋರ್ಟ್ ಬೆಂಡ್ ಕೌಂಟಿಯಲ್ಲಿರುವ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಕೇರಳದ ಕಾಸರಗೋಡಿನ ದಿನಗೂಲಿ ನೌಕರರ ದಂಪತಿ ಮಗನಾಗಿರುವ ಸುರೇಂದ್ರನ್, ಶಾಲಾ, ಕಾಲೇಜು ದಿನಗಳಲ್ಲಿ ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ತಾನೂ ಕೆಲಸ ಮಾಡುತ್ತಿದ್ದರು. ಶಾಲೆಗೇ ಹೋಗಲು ಕಷ್ಟವಾದಾಗ ಬಿಡಿ ಕಟ್ಟಿ ಜೀವನ ನಡೆಸುತ್ತಿದ್ದ ವ್ಯಕ್ತಿ ಇದೀಗ ನ್ಯಾಯಾಧೀಶರಾಗಿರುವುದು ಹೆಮ್ಮೆಯ ವಿಚಾರ.
10ನೇ ತರಗತಿ ಬಳಿಕ ಶಿಕ್ಷಣಕ್ಕೆ ತೆರೆ ಎಳೆದು ಬೀಡಿ ಕಟ್ಟಲು ಆರಂಭಿಸಿದ್ದ ಸುರೇಂದ್ರನ್, ಕಠಿಣ ಸಂದರ್ಭವು ಅವರ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತ್ತು. 1 ವರ್ಷದ ಬಳಿಕ ಮತ್ತೆ ಓದುವ ಬಯಕೆ ವ್ಯಕ್ತಪಡಿಸಿದ್ದರು. ಬಳಿಕ ಹಂತ ಹಂತವಾಗಿ ಬೆಳೆಯುತ್ತಾ ತನ್ನ ಛಲದಿಂದ ಇದೀಗ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ.
ಸುರೇಂದ್ರನ್ ಅವರು, 1995ರಲ್ಲಿ ಕಾನೂನು ಪದವಿ ಪಡೆದು, 1996ರಲ್ಲಿ ಕೇರಳದ ಹೊಸದುರ್ಗದಲ್ಲಿ ಪ್ರಾಕ್ಟೀಸ್ ಮಾಡಲು ಆರಂಭಿಸಿದ್ದರು. ಅನಂತರ ಕ್ರಮೇಣವಾಗಿ ಪ್ರಸಿದ್ಧ ವಕೀಲರಾದರು. ಬಳಿಕ 1 ದಶಕದ ನಂತರ ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದರು.
ಇದಾದ ನಂತರ 2007ರಲ್ಲಿ ಅವರ ಕುಟುಂಬಕ್ಕೆ ಅಮೆರಿಕಕ್ಕೆ ಹೋಗುವ ಅವಕಾಶ ಸಿಕ್ಕಿತ್ತು, ಬಳಿಕ ನರ್ಸ್ ಆಗಿದ್ದ ಅವರ ಪತ್ನಿಯನ್ನು ಅಮೆರಿಕದ ಪ್ರಮುಖ ವೈದ್ಯಕೀಯ ಸೌಲಭ್ಯವೊಂದರಲ್ಲಿ ಕೆಲಸ ಮಾಡಲು ಅವಕಾಶ ದೊರಕಿತ್ತು.
ಸುರೇಂದ್ರನ್ ಪತ್ನಿ ತಮ್ಮ ಮಗಳೊಂದಿಗೆ ಅಲ್ಲಿ ನೆಲೆಸಿದರು, ಅಮೆರಿಕಕ್ಕೆ ತೆರಳಿದ 2 ವರ್ಷಗಳ ನಂತರ, ಸುರೇಂದ್ರನ್ ಟೆಕ್ಸಾಸ್ ಬಾರ್ ಪರೀಕ್ಷೆಗೆ ಹಾಜರಾಗಿ, ಅವರು ತಮ್ಮ ಮೊದಲು ಪ್ರಯತ್ನದಲ್ಲಿ ಪಾಸ್ ಕೂಡ ಆದರು.