
ಹಿಂದಿನ ಸರಕಾರಗಳು ಮತ ರಾಜಕಾರಣ ಮಾಡಿದ್ದರೆ ನಾವು ಅಭಿವೃದ್ಧಿಗೆ ಆದ್ಯತೆ ಕೊಡುತ್ತಿದ್ದೇವೆ: ಪ್ರಧಾನಿ ಮೋದಿ
ಯಾದಗಿರಿ(Headlineskannada): ಹಿಂದಿನ ಸರ್ಕಾರಗಳು ಕೇವಲ ಮತ ರಾಜಕಾರಣ ಮಾತ್ರ ಮಾಡುತ್ತಿದ್ದರೆ, ನಾವು ಅಭಿವೃದ್ಧಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುರುವಾರ ಕೊಡೆಕಲ್‍ನಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗೆ 2500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ವಯಂಚಾಲಿತ ಸ್ಕಾಡಾ ಗೇಟ್ ಲೋಕಾರ್ಪಣೆ, ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ, ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಪ್ರಾಧಾನ್ಯತೆ ವಿಕಾಸ. ವಿಕಾಸ ಆದಂತೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತದೆ ಎಂದ ಮೋದಿ, ಆಡಳಿತದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೆ ಡಬಲ್ ಅಭಿವೃದ್ದಿ, ಎಲ್ಲರ ಕಲ್ಯಾಣವಾಗುತ್ತದೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಪಿಎಂ ಕಿಸಾನ್ ಜಾರಿಗೆ ತಂದಿದ್ದು, ಈ ನಿಧಿಗೆ ರಾಜ್ಯ ಸರ್ಕಾರ 4 ಸಾವಿರ ರೂ. ನೀಡುತ್ತಿದೆ. 3.5 ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಪ್ರಾರಂಭವಾದಾಗ, ಹದಿನೆಂಟು ಕೋಟಿ ಗ್ರಾಮೀಣ ಕುಟುಂಬಗಳಲ್ಲಿ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ನಳ್ಳಿ ನೀರಿನ ಸಂಪರ್ಕವನ್ನು ಹೊಂದಿದ್ದವು. ಇಂದು ದೇಶದ ಸುಮಾರು ಹನ್ನೊಂದು ಕೋಟಿ ಗ್ರಾಮೀಣ ಕುಟುಂಬಗಳು ನಳ್ಳಿ ನೀರಿನ ಸಂಪರ್ಕ ಪಡೆದಿವೆ ಎಂದು ತಿಳಿಸಿದರು.