ಸಚಿವ ಸುನಿಲ್ ಕುಮಾರ್'ಗೆ ಸಮುದಾಯದ ಬಗ್ಗೆ ಕಳಕಳಿ ಇದ್ದರೆ, ರಾಜೀನಾಮೆ ನೀಡಿ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿ: ಪ್ರಣವಾನಂದ ಸ್ವಾಮೀಜಿ
ಉಡುಪಿ (Headlineskannada): ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಸ್ವಾಭಿಮಾನ ಇದ್ದರೆ, ಸಮುದಾಯದ ಬಗ್ಗೆ ಕಳಕಳಿ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿಗಳು ನಾರಾಯಣಗುರು ನಿಗಮವನ್ನು ಬಜೆಟ್ ನಲ್ಲಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಈ ಹಿಂದೆ ಕೂಡ ಮುಖ್ಯಮಂತ್ರಿಗಳಾಗಿದ್ದವರೂ ಸಾಕಷ್ಟು ಬಾರಿ ಇಂತಹ ಭರವಸೆ ಕೊಟ್ಟಿದ್ದಾರೆ.ಈ ಪಾದಯಾತ್ರೆ ಕೇವಲ ನಿಗಮ ಸ್ಥಾಪನೆಗೆ ಸಂಬಂಧಿಸಿದ್ದು ಮಾತ್ರ ಅಲ್ಲ ,10 ಬೇಡಿಕೆಗಳ ಈಡೇರಿಕೆಗಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸುನಿಲ್ ಕುಮಾರ್ ಸಹಿತ ಇಡೀ ಸರಕಾರ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದಯವಿಟ್ಟು ನಮ್ಮ ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಈ ಮೊದಲು ಹೇಳಿದಂತೆಯೇ ತಾವು ನಿಗಮ ಸ್ಥಾಪನೆ ಮತ್ತು 10 ಬೇಡಿಕೆಗಳನ್ನು ಮುಂದಿಟ್ಟು ಬೆಂಗಳೂರಿನ ಫ್ರೀಡಂ ಪಾರ್ಕ್ ತನಕ ಪಾದಯಾತ್ರೆ ಮಾಡುವುದು ಶತಃಸಿದ್ಧ. ಇದನ್ನು ಯಾರೂ ತಪ್ಪಿಸಲು ಆಗದು ಎಂದು ಗುಡುಗಿದರು.