
ಜನರಿಂದ ತಿರಸ್ಜೃತಗೊಂಡಿರುವ ಸಿದ್ದರಾಮಯ್ಯ ಕೋಲಾರದಲ್ಲಿ ಯಶಸ್ಸು ಗಳಿಸಲ್ಲ: ಸಚಿವ ಸುನಿಲ್ ಕುಮಾರ್
ಉಡುಪಿ(Headlineskannada): ಪ್ರತಿ ಬಾರಿಯೂ ಕ್ಷೇತ್ರ ಬದಲಿಸುತ್ತಾ, ಜನರಿಂದ ತಿರಸ್ಕೃತಗೊಂಡು ಅವರಿಂದ ದೂರಾಗಿರುವ ಸಿದ್ದರಾಮಯ್ಯ ಹೊಸ ಪ್ರಯೋಗಕ್ಕಾಗಿ ಕೋಲಾರಕ್ಕೆ ಹೋಗುತ್ತಿದ್ದಾರೆ. ಖಂಡಿತವಾಗಿಯೂ ಇದರಲ್ಲಿ ಯಶಸ್ಸು ಗಳಿಸುವುದಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಳೆದ 15ವರ್ಷಗಳಿಂದ ಪಕ್ಷಕ್ಕೆ ಹಾಗೂ ಜನರಿಗೆ ಕೈ ಕೊಡುತ್ತಾ ಬರುತ್ತಿದ್ದಾರೆ. ಅವರನ್ನು ಜೆಡಿಎಸ್ ಉಪಮುಖ್ಯಮಂತ್ರಿ ಮಾಡಿತ್ತು. ಆದ್ರೆ, ಜೆಡಿಎಸ್ ಗೆ ಕೈ ಕೊಟ್ಟು ಕಾಂಗ್ರೆಸ್ ಸೇರಿದ್ರು. ವರುಣಾ ಕ್ಷೇತ್ರದ ಜನತೆ ಪಾರಂಪಾರಿಕವಾಗಿ ಗೆಲ್ಲಿಸಿಕೊಂಡು ಬರುತ್ತಿದ್ದರು. 2013ರಲ್ಲಿ ಅವರಿಗೆ ಕೈ ಕೊಟ್ರು. ಆ ನಂತರ ಬಾದಾಮಿ ಜನ ಗೆಲ್ಲಿಸಿದ್ರು, ಇದೀಗ ಅವರಿಗೆ ಕೈ ಕೊಟ್ಟಿದ್ದಾರೆ. ಈಗ ಕೋಲಾರಕ್ಕೆ ಬಂದು ಸ್ಪರ್ಧಿಸುತ್ತಿದ್ದಾರೆ. ಕೋಲಾರದ ಜನ ಅವರಿಗೆ ಕೈ ಕೊಡಬೇಕೆಂದು ನಾನು ವಿನಂತಿಸುತ್ತೇನೆ ಎಂದರು.
ಒಬ್ಬ ಜನಪ್ರತಿನಿಧಿಯಾದವನು ಸುದೀರ್ಘವಾಗಿ ಒಂದು ಕ್ಷೇತ್ರವನ್ನು ಸ್ಪರ್ಧೆ ಮಾಡುತ್ತಾ, ಅಭಿವೃದ್ಧಿ ಬಗ್ಗೆ ಪರಿಕಲ್ಪನೆ ಇಟ್ಟುಕೊಳ್ಳಬೇಕು. ಪ್ರತಿ ಚುನಾವಣೆಗೆ ಒಂದೊಂದು ಕಡೆ ಹೋಗುತ್ತೇನೆ ಎಂದಾದರೆ, ಅದರಲ್ಲಿ ಬದ್ಧತೆಯೂ ಇಲ್ಲ, ಕಮಿಟ್ಮೆಂಟ್ ಕೂಡ ಇಲ್ಲ. ಆ ಸಾಲಿನಲ್ಲಿ ಸಿದ್ದರಾಮಯ್ಯನವರು ಕೂಡ ಸೇರಿಕೊಳ್ಳುತ್ತಾರೆ ಎಂದು ಕುಟುಕಿದರು.
ಪ್ರಣವಾನಂದ ಸ್ವಾಮೀಜಿಗಳ ಪಾದಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾದಯಾತ್ರೆ, ಪ್ರತಿಭಟನೆ, ಹೋರಾಟ ಪ್ರಜಾಪ್ರಭುತ್ವದ ಒಂದು ಭಾಗ. ಸ್ವಾಮೀಜಿ ಯಾವ ಕಾರಣಕ್ಕೆ ಪ್ರತಿಭಟನೆ, ಹೋರಾಟ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಸ್ವಾಮೀಜಿಯವರು ಹೇಳಿರುವ ಪ್ರಮುಖ ಬೇಡಿಕೆಯನ್ನು ಇಡೀ ಸಮಾಜ ಒಪ್ಪಿಕೊಂಡು, ಸರಕಾರವೂ ಒಪ್ಪಿ ಘೋಷಣೆ ಮಾಡಿದೆ. ಇನ್ನೂ ಕೂಡ ಪಾದಯಾತ್ರೆ ಮುಂದುವರಿಸುತ್ತಾರೆ ಎಂದಾದರೆ, ಅವರು ಈ ಬಗ್ಗೆ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.