ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ಎಲ್ಲ ಹುದ್ದೆಗಳ ಭರ್ತಿಗೆ ಹಣ ಕೇಳುತ್ತಿದ್ದಾರೆ; ಇದನ್ನು ಸರ್ಕಾರ ಎನ್ನಲಾಗುತ್ತದೆಯೇ?: ಎಚ್.ವಿಶ್ವನಾಥ್
ಹುಬ್ಬಳ್ಳಿ: ಇಂದು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ಎಲ್ಲ ಹುದ್ದೆಗಳ ಭರ್ತಿಗೆ ಹಣ ಕೇಳುತ್ತಿದ್ದಾರೆ. ಇದನ್ನು ಸರ್ಕಾರ ಎನ್ನಲಾಗುತ್ತದೆಯೇ? ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಶಾಲೆಗೆ ಕೇಸರಿ ಬಣ್ಣ ಬಳಿಯುದರಲ್ಲಿಯೇ ಬಿಜೆಪಿಯವರು ಬಿಸಿಯಾಗಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಸರಿಯಾಗಿ ಪರೀಕ್ಷೆ ನಡಸುತ್ತಿಲ್ಲ ಎಂದು ದೂರಿದರು.
ಏನೋ ಒಂದು ಬದಲಾವಣೆಯಾಗಬಹುದು ಎಂಬ ಭ್ರಮೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೆ. ಇವರಂಥ ಎಡವಟ್ಟು ಗಿರಾಕಿಗಳು ಯಾರೂ ಇಲ್ಲ ಎಂದ ಎಚ್.ವಿಶ್ವನಾಥ್, ಶಿಕ್ಷಣ ವ್ಯವಸ್ಥೆ ಇಂದು ಹದಗೆಟ್ಟಿದೆ. ಎಲ್ಲ ಹುದ್ದೆಗಳ ಭರ್ತಿಗೆ ದುಡ್ಡು ಕೇಳುತ್ತಿದ್ದಾರೆ. ಇದನ್ನು ಸರ್ಕಾರ ಎನ್ನಲಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂತೆದರೆ ಸಾಕು ಎಷ್ಟು ಹಣ ಇಟ್ಟಿದ್ದೀಯಾ ಎಂದು ಕೇಳುತ್ತಾರೆ. ಇಂದು ರಾಜಕೀಯ ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವರಾಗಿದ್ದಾರೆ. ಇದು ಮಾರಕ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಾರೆ. ನಾನು ಆರ್ಥಿಕವಾಗಿ ಚುನಾವಣಾ ಎದುರಿಸುವಂಥ ಸ್ಥಿತಿವಂತನಲ್ಲ. ಸೇವಾ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದರು.