
ಗೌತಮ್ ಅದಾನಿಗೆ ಬಿಗ್ ಶಾಕ್; ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ 'ಅತ್ಯಂತ ಶ್ರೀಮಂತ ವ್ಯಕ್ತಿ'
ನವದೆಹಲಿ: ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ಅದಾನಿ ಕಂಪನಿಯ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಉದ್ಯಮಿ ಗೌತಮ್ ಅದಾನಿಗೆ ಸಂಕಷ್ಟ ಎದುರಾಗುತ್ತಿದ್ದಂತೆಯೇ ಈಗ ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಅವರು ಹೊರಬಿದ್ದಿದ್ದಾರೆ.
ಪ್ರಸಕ್ತ ಅದಾನಿ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಈ ಮಧ್ಯೆ ಇಂದು ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಗೌತಮ್ ಅದಾನಿ ಅವರ ಸಂಪತ್ತು ಶೇಕಡಾ 21.77 ಅಥವಾ USD 16.2 ಬಿಲಿಯನ್ ಕುಸಿತ ಕಂಡಿದೆ.
ಕಳೆದ 2 ವಾರಗಳಿಂದ ಗೌತಮ್ ಅದಾನಿ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ಕಾಣುತ್ತಿರುವ ಮಧ್ಯೆ ವಿಶ್ವದ ಮೊದಲ 500 ಶ್ರೀಮಂತ ಪುರುಷರು ಹಾಗು ಮಹಿಳೆಯರ ಪಟ್ಟಿಯಲ್ಲಿ, ಅದಾನಿ 2023ನೇ ವರ್ಷದಲ್ಲಿ ಅತಿದೊಡ್ಡ ಕುಸಿತ ಕಂಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಫ್ರೆಂಚ್ ಐಷಾರಾಮಿ ಫ್ಯಾಷನ್ ದೈತ್ಯ ಲೂಯಿ ವಿಟಾನ್ ಹಾಗು ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಒಟ್ಟು ನಿವ್ವಳ ಆಸ್ತಿ 217.5 ಬಿಲಿಯನ್ ಡಾಲರ್ ಇದ್ದು, ಎಲೋನ್ ಮಸ್ಕ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಎಲೋನ್ ಮಸ್ಕ್ ಅವರ ಒಟ್ಟು ನಿವ್ವಳ ಮೌಲ್ಯ 183.2 ಬಿಲಿಯನ್ ಡಾಲರ್ ಆಗಿದೆ. 3ನೇ ಸ್ಥಾನದಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇದ್ದು, ಅವರ ಒಟ್ಟು ನಿವ್ವಳ ಮೌಲ್ಯ 136 ಬಿಲಿಯನ್ ಡಾಲರ್ ಆಗಿದೆ.