ಬಿಹಾರಕ್ಕೆ ಹೋಗಬೇಕಿದ್ದ ಪ್ರಯಾಣಿಕನನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿ ಎಡವಟ್ಟು ಮಾಡಿಕೊಂಡ ಇಂಡಿಗೋ ಏರ್‌ಲೈನ್ಸ್! ಮುಂದೆ ಏನಾಯಿತು ನೋಡಿ...
ಹೊಸದಿಲ್ಲಿ: ಇಂಡಿಗೋ ಏರ್‌ಲೈನ್ಸ್ ವಿಮಾನವೊಂದು ಬಿಹಾರಕ್ಕೆ ಹೋಗಬೇಕಿದ್ದ ಪ್ರಯಾಣಿಕನನ್ನು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿ ಎಡವಟ್ಟು ಮಾಡಿರುವ ಘಟನೆ ನಡೆದಿದೆ.
ಬಿಹಾರದ ಪಟನಾಕ್ಕೆ ತೆರಳುವ ವಿಮಾನದ ಬದಲು, ಅಲ್ಲಿಂದ 1400 ಕಿಮೀ ದೂರದಲ್ಲಿರುವ ಉದಯಪುರಕ್ಕೆ ಹೋಗುವ ಬೇರೆ ವಿಮಾನದಲ್ಲಿ ಪ್ರಯಾಣಿಕನನ್ನು ಹತ್ತಿಸಿಕೊಳ್ಳಲಾಗಿತ್ತು. ಈ ಘಟನೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಘಟನೆ ನಡೆದಿರುವುದು ಜನವರಿ 30ರಂದು, ಉದಯಪುರಕ್ಕೆ ಕರೆದೊಯ್ದ ವಿಮಾನ ಪ್ರಯಾಣಿಕನನ್ನು ಆತ ತಲುಪಬೇಕಿದ್ದ ಸ್ಥಳವಾದ ಪಟನಾಕ್ಕೆ ಮರುದಿನ ಕಳುಹಿಸಿದೆ.
ಪ್ರಯಾಣಿಕ ಅಫ್ಸಾರ್ ಹುಸೇನ್ ಎಂಬವರು ಜ. 30ರಂದು ಇಂಡಿಗೋ ವಿಮಾನ 6E-214ನಲ್ಲಿ ಬಿಹಾರದ ಪಟನಾಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ವಿಮಾನ ಏರಲು ದಿಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದ ಅವರು ಪ್ರಮಾದವಶಾತ್ ಉದಯಪುರಕ್ಕೆ ತೆರಳುವ ಇಂಡಿಗೋದ 6E-319 ವಿಮಾನ ಏರಿದ್ದರು.
ಉದಯಪುರ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕವಷ್ಟೇ ಅಫ್ಸಾರ್ ಹುಸೇನ್'ರಿಗೆ ತಮ್ಮ ತಪ್ಪು ಅರಿವಾಗಿದೆ. ಉದಯಪುರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಿದ ಬಳಿಕ ಅವರು ಈ ವಿಚಾರದ ಬಗ್ಗೆ ವಿಮಾನಯಾನ ಸಂಸ್ಥೆಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಇಂಡಿಗೋ ಸಂಸ್ಥೆಯು ಅದೇ ದಿನ ಅಫ್ಸಾರ್ ಹುಸೇನ್ ಅವರನ್ನು ದಿಲ್ಲಿಗೆ ವಾಪಸ್ ಕರೆತಂದಿದೆ. ಮಾರನೇ ದಿನ ಅಂದರೆ ಜನವರಿ 31ರಂದು ಪಟನಾಕ್ಕೆ ಕರೆದೊಯ್ದಿದೆ.