ಕ್ಯಾಲಿಕಟ್'ನಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ; ತುರ್ತು ಭೂಸ್ಪರ್ಶ: ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ
ತಿರುವನಂತಪುರಂ: ಕ್ಯಾಲಿಕಟ್'ನಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಹೈಡ್ರಾಲಿಕ್ ವೈಫಲ್ಯದ ಶಂಕೆಯಿಂದಾಗಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಈ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಕಲ್ಲಿಕೋಟೆಯ ಕರಿಪುರ್ ವಿಮಾನ ನಿಲ್ದಾಣದಿಂದ ಶುಕ್ರವಾರ ಬೆಳಿಗ್ಗೆ 9.44ಕ್ಕೆ ವಿಮಾನ ಹೊರಟಿತ್ತು. ಬೆಳಗ್ಗೆ 11 ಗಂಟೆಗೆ ವಿಮಾನವನ್ನು ಲ್ಯಾಂಡ್ ಮಾಡಲು ಮೊದಲು ಸಮಯ ನಿಗದಿ ಮಾಡಲಾಗಿತ್ತು. ಆದರೆ ವಿಮಾನದ ಇಂಧನವನ್ನು ಉರಿಸುವ ಮೂಲಕ ಅದರ ತೂಕವನ್ನು ತಗ್ಗಿಸುವ ಸಲುವಾಗಿ ಮತ್ತಷ್ಟು ಹಾರಾಟ ನಡೆಸಲಾಯಿತು ಎಂದು ಹೇಳಲಾಗಿದೆ. ಲ್ಯಾಂಡಿಂಗ್ ಮಾಡುವುದಕ್ಕೂ ಮುನ್ನ 2 ಗಂಟೆ ಅದು ಹಾರಾಟ ನಡೆಸುವ ಮೂಲಕ ಇಂಧನ ಮಟ್ಟವನ್ನು ಕಡಿಮೆ ಮಾಡಲಾಗಿತ್ತು.
ಏರ್ ಇಂಡಿಯಾ ಎಕ್ಸ್ ಪ್ರೆಸ್ಐ ಎಕ್ಸ್ 3 385 ವಿಮಾನದಲ್ಲಿ 182 ಪ್ರಯಾಣಿಕರಿದ್ದರು. ಕ್ಯಾಲಿಕಟ್‌ನಿಂದ ಟೇಕ್‌ಆಫ್ ಆಗುವಾಗ ವಿಮಾನದ ಹಿಂಭಾಗವು ರನ್‌ವೇಗೆ ಅಪ್ಪಳಿಸಿತು. ಈ ಕಾರಣದಿಂದ ತರಾತುರಿಯಲ್ಲಿ ಪೈಲಟ್‌ಗಳು ವಿಮಾನದ ಇಂಧನವನ್ನು ಅರಬ್ಬಿ ಸಮುದ್ರದಲ್ಲಿ ಎಸೆದು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಗಿತ್ತು.