ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್'ದಾರರಿಗೆ 10 ಕೆ.ಜಿ ಉಚಿತ ಅಕ್ಕಿ; 3ನೇ ಗ್ಯಾರೆಂಟಿ ಘೋಷಣೆ ಮಾಡಿದ ಕಾಂಗ್ರೆಸ್
ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಿದ ಕೂಡಲೆ ರಾಜ್ಯದ ಬಡಕುಟುಂಬದ ಬಿಪಿಎಲ್ ಕಾರ್ಡ್'ದಾರರ ಪ್ರತೀ ವ್ಯಕ್ತಿಗೆ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ನಾವು ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ...ಮುಂದೆಯೂ ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಮೂರನೇ ಗ್ಯಾರೆಂಟಿ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ.
ನಗರದಲ್ಲಿ ಶುಕ್ರವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಈಗಾಗಲೇ 2 ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ನಾವು ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆ ಯೋಜನೆ ಘೋಷಣೆ ಮಾಡಿದ್ದೇವೆ. ನಮ್ಮ ತುರ್ತು ಪತ್ರಿಕಾಗೋಷ್ಠಿಯ 3ನೇ ಘೋಷಣೆ ಅಂದರೆ ಅನ್ನ ಭಾಗ್ಯದ ಅಕ್ಕಿ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಸಿದ್ದಾರೆ. ಆದ್ದರಿಂದ 3ನೇ ಗ್ಯಾರಂಟಿ ಪ್ರಕಟಿಸುತ್ತಿದ್ದೇವೆ. ಸರಕಾರ ಅಧಿಕಾರಕ್ಕೆ ಬಂದರೆ ಜನರ ಹಸಿವು ನೀಗಿಸಲು ಅನ್ನಭಾಗ್ಯ ಅಕ್ಕಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಕೊಡಲು ಕಾಂಗ್ರೆಸ್ ಮೂರನೇ ಗ್ಯಾರಂಟಿ ನೀಡಲಿದೆ ಎಂದು ತಿಳಿಸಿದರು.