ಬಿಹಾರದಲ್ಲಿ ಬರೋಬ್ಬರಿ 2 ಕಿಲೋ ಮೀಟರ್ ಉದ್ದದ ರೈಲ್ವೇ ಹಳಿಯನ್ನೇ ಕದ್ದು ಗುಜರಿಗೆ ಮಾರಿದ ಖದೀಮರು !
ಪಾಟ್ನಾ: ಬಿಹಾರದಲ್ಲಿ ಬರೋಬ್ಬರಿ 2 ಕಿಲೋ ಮೀಟರ್ ಉದ್ದದ ರೈಲ್ವೇ ಹಳಿಯನ್ನೇ ಕದ್ದು ಗುಜರಿ ಅಂಗಡಿಗೆ ಮಾರಿದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆ ನಡೆದಿರುವುದು ಬಿಹಾರದ ಸಮಸ್ತಿಪುರ್ ರೈಲ್ವೇ ವಿಭಾಗದಲ್ಲಿ. ಇಲ್ಲಿನ ರೈಲ್ವೇ ಹಳಿಯನ್ನೇ ಕಳ್ಳರು ಕದ್ದು ಗುಜರಿ ಅಂಗಡಿಗೆ ಮಾರಿದ್ದಾರೆ.
RPF ಸಿಬ್ಬಂದಿ ಸಹಾಯದಿಂದ ಕೋಟ್ಯಂಟರ ರೂಪಾಯಿ ಮೌಲ್ಯದ ರೈಲಿನ ಹಳೇ ಸಾಮಗ್ರಿಗಳನ್ನು ಗುಜರಿ ಅಂಗಡಿಗೆ ಮಾರಾಟ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ರೈಲ್ವೇ ರಕ್ಷಣಾ ಪಡೆಯ (ಆರ್‌ಪಿಎಫ್) ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಸ್ತಿಪುರ್ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಅಗರ್ವಾಲ್, ಈ ಕಳ್ಳತನ ಪ್ರಕರಣದ ತನಿಖೆಗೆ ಇಲಾಖಾ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಪ್ರಕರಣದ ಬಗ್ಗೆ ಇಲಾಖೆಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡದ ಹಿನ್ನೆಲೆ ಝಂಜರ್‌ಪುರ RPF ಹೊರ ಠಾಣೆ ಉಸ್ತುವಾರಿ ಶ್ರೀನಿವಾಸ್ ಹಾಗು ಮಧುಬನಿಯ ರೈಲ್ವೇ ವಿಭಾಗದ ಜಮಾದಾರ್ ಮುಖೇಶ್ ಕುಮಾರ್ ಸಿಂಗ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಮಸ್ತಿಪುರ್ ರೈಲ್ವೆ ವಿಭಾಗದ ಪಾಂಡೌಲ್ ನಿಲ್ದಾಣದಿಂದ ಲೋಹತ್ ಸಕ್ಕರೆ ಕಾರ್ಖಾನೆಯವರೆಗೆ ರೈಲು ಮಾರ್ಗವನ್ನು ಅಳವಡಿಸಲಾಗಿತ್ತು. ಆದರೆ ಅದನ್ನು ಅನೇಕ ವರ್ಷಗಳಿಂದ ಉಪಯೋಗಿಸದಿದ್ದರಿಂದ ಆ ಹಳಿ ಹದಗೆಟ್ಟಿತ್ತು.
ಈ ರೈಲ್ವೇ ಹಳಿಯನ್ನು ಹರಾಜು ಮಾಡದೇ ನೇರವಾಗಿ ಗುಜರಿ ಮಾಲೀಕನಿಗೆ ಮಾರಲಾಗಿರುವುದು ಈಗ ರೈಲ್ವೇ ಇಲಾಖೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಸದ್ಯ ಈ ಕಳ್ಳತನ ಪ್ರಕರಣವನ್ನು ದರ್ಬಂಗಾ ಆರ್‌ಪಿಎಫ್ ಪೋಸ್ಟ್ ಮತ್ತು ರೈಲ್ವೇ ವಿಚಕ್ಷಣಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.