ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಮಾಡದಿರುವುದಕ್ಕೆ ಸಿದ್ದರಾಮಯ್ಯ ಕೊಟ್ಟ ಕಾರಣ ಏನು..?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರನನ್ನು ಸಚಿವರನ್ನಾಗಿ ಮಾಡುವುದನ್ನು ತಪ್ಪಿಸುದಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡದಿರಲು ಈ ಕಾರಣದ ಜೊತೆಗೆ ಬೊಮ್ಮಾಯಿ ಬಳಿಯೇ ಹಲವು ಖಾತೆಗಳನ್ನು ಇಟ್ಟುಕೊಂಡಿರುವುದಕ್ಕೆ ಹೆಚ್ಚೆಚ್ಚು ಲಂಚ ಸ್ವೀಕಾರ ನಡೆಯುತ್ತಿರುವುದು ಕೂಡ ಒಂದು ಕಾರಣವಾಗಿದೆ ಎಂದರು.
ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರಿಗೆ ಬಿಜೆಪಿ ಅನ್ಯಾಯ ಮಾಡಿದೆ, ಆರ್‌ಎಸ್‌ಎಸ್‌ನೊಂದಿಗೆ ಸೇರಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ ಎಂದರು.
ಯಡಿಯೂರಪ್ಪ ಪುತ್ರನಿಗೆ ಸಚಿವ ಸ್ಥಾನ ನೀಡುವುದನ್ನು ತಪ್ಪಿಸುವ ಸಲುವಾಗಿಯೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ಈ ಕಾರಣದಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದರು.
ಸಂಪುಟ ವಿಸ್ತರಣೆ ಮಾಡದೆ, ಬೊಮ್ಮಾಯಿ ತಮ್ಮ ಬಳಿಯೇ ಹಲವು ಖಾತೆಗಳನ್ನು ಇಟ್ಟುಕೊಂಡು ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಮುಖ್ಯಮಂತ್ರಿ ಅವರ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR), ಬೆಂಗಳೂರು ನಗರಾಭಿವೃದ್ಧಿ ಮತ್ತು ಹಣಕಾಸು ಸೇರಿದಂತೆ ಸುಮಾರು 8 ಖಾತೆಗಳಿವೆ. ಬಹುತೇಕ ನಾಲ್ಕನೇ ಒಂದು ಭಾಗದಷ್ಟು ಖಾತೆಗಳು ಮುಖ್ಯಮಂತ್ರಿಯವರ ಬಳಿ ಇವೆ. ಆದರೂ ಸಂಪುಟ ವಿಸ್ತರಣೆ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.