2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ; ಮಠ-ಮಂದಿರಗಳ ಅಭಿವೃದ್ಧಿಗೆ 1,000 ಕೋಟಿ ರೂ ಅನುದಾನ ನೀಡಿದ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಮಠ-ಮಂದಿರಗಳ ಅಭಿವೃದ್ಧಿಗೆ 1,000 ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದ್ದಾರೆ.
ಬಜೆಟ್ನಲ್ಲಿ ನಂದಿ ಗಿರಿಧಾಮ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ನಂದಿಬೆಟ್ಟಕ್ಕೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಾಣ, ಪ್ರವಾಸಿ ಗೈಡ್‌ಗಳ ಮಾಸಿಕ ಪ್ರೋತ್ಸಾಹ ಧನ 2 ರಿಂದ 5 ಸಾವಿರಕ್ಕೆ ಏರಿಕೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ರೂ. ಕೋಟಿ ಬಿಡುಗಡೆ ಮಾಡುವುದಾಗಿ ಬೊಮ್ಮಾಯಿ ಹೇಳಿದ್ದಾರೆ.
ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದೂ ಬಜೆಟ್ನಲ್ಲಿ ಘೋಷಿಸಿದ್ದಾರೆ.
'ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ' ಎಂಬ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಎಲ್ಲ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಜಾನಪದ ಹಬ್ಬವನ್ನು ಆಯೋಜನೆ ಬಗ್ಗೆ ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ರಾಜ್ಯದ ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ರವನ್ನು ನೀಡಲಾಗುವುದು. ಹಾಗೆಯೇ ಗಡಿ ಪ್ರದೇಶದ ರಸ್ತೆಗಳ ಅಭಿವೃದ್ಧಿ ಹಾಗೂ ಸಮಗ್ರ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗಿಸಲಾಗಿದೆ. ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ, ಕಲಾ ಗ್ಯಾಲರಿ ನಿರ್ಮಿಸಲಾಗುವುದು ಹಾಗು ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ.
ಶ್ರೀ ಭುವನೇಶ್ವರಿ ತಾಯಿಯ ಬೃಹತ್ ಮೂರ್ತಿ ಮತ್ತು ಥೀಮ್ ಪಾರ್ಕ್ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.