
'ಅದಾನಿ ಹಗರಣ' ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ; ಇದರಲ್ಲಿ ಕೇಂದ್ರ ಸರ್ಕಾರವೂ ಭಾಗಿ: ತನಿಖೆಗೆ ಪ್ರತಿಪಕ್ಷಗಳ ಒತ್ತಾಯ
ನವದೆಹಲಿ: ಅದಾನಿ ಗ್ರೂಪ್ ಕಂಪೆನಿಯ ವಿರುದ್ಧ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿರುವ ಆರೋಪದ ಬಗ್ಗೆ ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯಿಸಿರುವ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ಇದು ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ ಎಂದು ಆರೋಪಿಸಿವೆ.
ಶುಕ್ರವಾರ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಈ ವೇಳೆ ಉಭಯ ಸದನಗಳನ್ನು ಮುಂದೂಡಲಾಗಿದೆ.
ಅನಂತರ ಪತ್ರಿಕಾಗೋಷ್ಠಿ ನಡೆಸಿದ ಪ್ರತಿಪಕ್ಷಗಳ ಸಂಸದರು, ಅದಾನಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ, ಅದಾನಿ ಹಗರಣ ಶತಮಾನದ ಅತಿದೊಡ್ಡ ಭ್ರಷ್ಟಾಚಾರವಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಕೂಡಾ ಭಾಗಿಯಾಗಿದೆ ಎಂದು ಆರೋಪಿಸಿದರು.
ಶತಮಾನದ ಇಂಥ ದೊಡ್ಡ ಹಗರಣದ ವಿರುದ್ಧ ನಾವು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದೇವೆ. ನಾವು ಜಂಟಿ ಸದನ ಸಮಿತಿ ತನಿಖೆಗೆ ಅಥವಾ ಸಿಜೆಐ ಅಡಿಯಲ್ಲಿ ತನಿಖೆಗೆ ಒತ್ತಾಯಿಸುತ್ತೇವೆ. ಈ ಹಗರಣದ ಮೂಲಕ ಲಕ್ಷಾಂತರ ರೂಪಾಯಿ ಹಿಂಪಡೆಯುವಾಗ ಇಡಿ, ಆದಾಯ ತೆರಿಗೆ ಇಲಾಖೆ ಎಲ್ಲಿತ್ತು? ಇದು ಅತಿದೊಡ್ಡ ಭ್ರಷ್ಟಾಚಾರವಾಗಿದ್ದು, ಕೇಂದ್ರ ಬಿಜೆಪಿ ಸರ್ಕಾರದ ಕಣ್ಗಾವಲಿನಲ್ಲೇ ಈ ಹಗರಣ ನಡೆದಿದೆ" ಎಂದು ಆಕ್ರೋಶ ಹೊರಹಾಕಿದರು.
"ನಾವು ಅದಾನಿ ಗ್ರೂಪ್ ಕಂಪೆನಿಯಲ್ಲಿ ನಡೆದಿರುವ ವಿಷಯದ ಬಗ್ಗೆ ತನಿಖೆಗೆ ಒತ್ತಾಯಿಸುತ್ತೇವೆ. ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳು, ಅವರ ಸ್ನೇಹಿತರಿಗೆ ಲಾಭಕ್ಕಾಗಿ ಮಾತ್ರ ಇವೆ ಎಂದು ನಾವು ಈ ಹಿಂದಿನಿಂದಲೂ ಹೇಳುತ್ತಿದ್ದೇವೆ. ಈಗ ನಾವು ಮಾಡಿದ ಆರೋಪಗಳೆಲ್ಲವೂ ಸಾಬೀತಾಗಿದೆ" ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.
ಪ್ರಸಕ್ತ ದೇಶದ ಆರ್ಥಿಕತೆ ಕುಸಿದಿದೆ. ಬ್ಯಾಂಕ್‌ನಿಂದ ನಮ್ಮ ಹಣ ಡ್ರಾ ಮಾಡಬೇಕೆಂದರೂ ಹಣ ಇಲ್ಲ ಎಂದು ಜನ ಕಂಗಾಲಾಗಿದ್ದಾರೆ. ಪ್ರತಿಪಕ್ಷಗಳೆಲ್ಲಾ ಈ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದರೂ ಸರ್ಕಾರ ತನಿಖೆ ಮಾಡಲು ಸಿದ್ಧವಿಲ್ಲ" ಎಂದು ಸಮಾಜವಾದಿ ಪಕ್ಷದ ಸಂದ ರಾಮಗೋಪಾಲ್ ಯಾದವ್ ಅವರು ಹೇಳಿದ್ದಾರೆ.