ನಟ ಕಿಚ್ಚ ಸುದೀಪ್'ರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್; ಕುತೂಹಲಕ್ಕೆ ಎಡೆಮಾಡಿಕೊಟ್ಟ ದಿಢೀರ್ ಭೇಟಿ
ಬೆಂಗಳೂರು: ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿರುವ ಮಧ್ಯೆ ಮತ್ತೆ ಇನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಿಢೀರ್ ಅಂತ ಭೇಟಿ ನೀಡಿರುವುದು ಮತ್ತಷ್ಟು ಪುಷ್ಟಿ ನೀಡಿದೆ.
ಕೆಲವು ದಿನಗಳ ಹಿಂದೆ ನಟಿ ರಮ್ಯಾ ಮೂಲಕ ಕಿಚ್ಚ ಸುದೀಪ್ ಅವರನ್ನು ಕಾಂಗ್ರೆಸ್'ಗೆ ಕರೆತರುವ ಯತ್ನ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು. ಜೊತೆಗೆ ಕಿಚ್ಚ ಸುದೀಪ್ ಜೊತೆ ಕಾಂಗ್ರೆಸ್ ನಾಯಕರು ಕೂಡ ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಕಿಚ್ಚ ಸುದೀಪ್ ಮಾತ್ರ ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲ್ಲ. ನನಗೆ ರಾಜಕೀಯ ಅಂದರೆ ಆಗಿಬರಲ್ಲ, ನಾನೊಬ್ಬ ನಟ, ನನಗೆ ರಾಜಕೀಯ ಗೊತ್ತಿಲ್ಲ ಎಂದಿದ್ದರು. ಈ ಮಧ್ಯೆ ಕಿಚ್ಚ ಸುದೀಪ್ ಪದೇ ಪದೇ ರಾಜಕಾರಣದಲ್ಲಿ ಹೆಸರು ಕೇಳಿ ಬರುತ್ತಲೇ ಇದೆ.
ಆದರೆ ಇಂದು ಡಿ.ಕೆ. ಶಿವಕುಮಾರ್ ಭೇಟಿಯ ಹಿಂದೆ ರಾಜಕೀಯ ವಿಷಯ ಇರಲಿಲ್ಲ, ಡಿಕೆಶಿ ಒಡೆತನದ ಮಾಲ್ ವೊಂದರಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಉದ್ಘಾಟನೆಗೆ ಸುದೀಪ್ ಅವರನ್ನು ಆಹ್ವಾನಿಸಲು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಡಿಕೆಶಿಗೆ ನಲಪಾಡ್ ಕೂಡ ಜೊತೆಯಾಗಿದ್ದರು.