ರೈತರಲ್ಲಿ ಕಣ್ಣೀರು ತರಿಸುತ್ತಿರುವ ಈರುಳ್ಳಿ; 512 ಕೆಜಿ ಈರುಳ್ಳಿ ಮಾರಾಟ ಮಾಡಿದ ರೈತನಿಗೆ ಸಿಕ್ಕಿದ್ದು ಕೇವಲ 2.49 ರೂ.ಲಾಭ!
ಸೊಲ್ಲಾಪುರ: ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದ್ದು, ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ತೀವ್ರ ಕುಸಿತ ಕಾಣುತ್ತಿದ್ದು, ಈಗ ಸೊಲ್ಲಾಪುರದ ರೈತರೊಬ್ಬರು ತಮ್ಮ 512 ಕೆಜಿ ಈರುಳ್ಳಿಯನ್ನು ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ ಕೇವಲ 2.49 ರೂ. ಲಾಭ ಗಳಿಸಿದ್ದು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸೊಲ್ಲಾಪುರದ ಬಾರ್ಶಿ ತಹಸಿಲ್‌ನಲ್ಲಿ ವಾಸವಾಗಿರುವ 63 ವರ್ಷದ ರಾಜೇಂದ್ರ ಚವ್ಹಾಣ ಎಂಬ ರೈತ ಸೊಲ್ಲಾಪುರ ಮಾರುಕಟ್ಟೆ APMC ಯಾರ್ಡ್‌ನಲ್ಲಿ ಈರುಳ್ಳಿಯನ್ನು ಪ್ರತಿ ಕೆಜಿಗೆ 1 ರೂಪಾಯಿಯಂತೆ ಮಾರಾಟ ಮಾಡಿದ್ದು, ಒಟ್ಟು 512 ಕೆಜಿಗೆ 512 ರೂಪಾಯಿ ಸಿಕ್ಕಿದೆ.
ಬಳಿಕ PTI ಜೊತೆ ಮಾತನಾಡಿದ ಚವ್ಹಾಣ್, ತಾನು 5 ಕ್ವಿಂಟಾಲ್‌ಗಿಂತ ಹೆಚ್ಚು ತೂಕದ 10 ಚೀಲ ಈರುಳ್ಳಿಯನ್ನು ಸೋಲಾಪುರದ ಈರುಳ್ಳಿ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದು, ಲೋಡಿಂಗ್, ಸಾರಿಗೆ, ಕಾರ್ಮಿಕ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ನನಗೆ ಸಿಕ್ಕಿದ್ದು ಕೇವಲ 2.49 ರೂಪಾಯಿ ಸಿಕ್ಕಿದೆ ಎಂದಿದ್ದಾರೆ.
ಈರುಳ್ಳಿಯನ್ನು ಲೋಡ್ ಮಾಡಲು, ಕೂಲಿ, ಸಾಗಣೆ ಮತ್ತು ಇತರ ಶುಲ್ಕವಾಗಿ 509.51 ರೂಪಾಯಿ ಕಡಿತಗೊಳಿಸಿ ನನಗೆ 2.49 ಬಂದಿದೆ. ಇದು ನನಂಥ ರೈತರಿಗೆ ಮಾಡುವ ಅವಮಾನ, ಇದರಿಂದ ಮುಂದೆ ನಾವು ಹೇಗೆ ಬದುಕುವುದು ಎಂದು ಕಣ್ಣೀರು ಹಾಕಿದ್ದಾರೆ.