ಪಿಟೀಲೊ ಕಟೀಲೋ ಅಂತಾ ಒಬ್ಬ ಇದ್ದಾನೆ...ಇವ ರಾಜಕೀಯದಲ್ಲಿ ಇರಲು ಲಾಯಕ್ಕಾ: ನಳಿನ್ ಕುಮಾರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಪಿಟೀಲೊ...ಕಟೀಲ್ ಅಂತಾ ಒಬ್ಬ ಇದ್ದಾನೆ... ನನ್ನ ಪ್ರಕಾರ ಆತನಿಗೆ ಬಿಜೆಪಿ ರಾಜ್ಯಾಧ್ಯಕ್ಷನಾಗಲು ಅರ್ಹತೆಯೇ ಇಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ ಎಂದರೆ ಲವ್ ಜಿ#ಹಾದ್ ಬಗ್ಗೆ ಮಾತನಾಡಿ ಎಂದು ಹೇಳ್ತಾರೆ. ಇವರೆಲ್ಲಾ ರಾಜಕೀಯದಲ್ಲಿ ಇರಲು ಲಾಯಕ್ಕಾ...ಇಂದು ನಾವು ಯಾವ ದಿಕ್ಕಿಗೆ ಹೋಗುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ತುಮಕೂರಿನ ಮಾಜಿ ಶಾಸಕ, ಬಿಜೆಪಿಯ ಕಿರಣ್ ಕುಮಾರ್ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಮೈಸೂರಿನ ಸಂದೇಶ್ ನಾಗರಾಜ್, ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್ ನಿಂಗಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದರು.
ಬಿಜೆಪಿಯವರದ್ದು ದ್ವೇ#ಷದ ರಾಜಕಾರಣ. ಧರ್ಮ ಧರ್ಮಗಳ ಮಧ್ಯೆ ದ್ವೇ#ಷವನ್ನು ಹಚ್ಚಿ, ಆ ಮೂಲಕ ಮತಪಡೆಯುವುದನ್ನು ಬಿಜೆಪಿ ಮಾಡ್ಕೊಂಡು ಬರುತ್ತಿದೆ. ಅವರಿಗೆ ಜನರ ನೋವು ಅರ್ಥ ಆಗಲ್ಲ. ಎಲ್ಲಿ ಹೋದರು ಅವರು ಅಭಿವೃದ್ಧಿಯಾಗಲಿ, ಜನರ ಬಗ್ಗೆಯಾಗಲಿ ಮಾತನಾಡಲ್ಲ, ಬರೀ ದ್ವೇ#ಷವನ್ನು ಸೃಷ್ಟಿಸುವುದೇ ಅವರ ಕೆಲಸ ಎಂದರು.
ಇತ್ತೀಚೆಗೆ ಅಮಿತ್ ಶಾ ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಈ ಸಲದ ಚುನಾವಣೆ ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ಕ ಎಂದು ಹೇಳ್ತಾರೆ. ಇನ್ನೊಬ್ಬ ಬಿಜೆಪಿಯವ ಮಹಾತ್ಮಾ ಗಾಂಧಿ ವರ್ಸಸ್ ಸಾವರ್ಕರ್, ಮಹಾತ್ಮಾ ಗಾಂಧಿ ವರ್ಸಸ್ ಗೋಡ್ಸೆ ಎಂದು ಕಿಚ್ಚಿನ ಮಾತುಗಳನ್ನಾಡುತ್ತಾರೆ. ಬಿಜೆಪಿಯವರು ರಾಜಕಾರಣ ಮಾಡಲು ಬಂದಿದ್ದಾರಾ ಅಥವಾ ಸಮಾಜವನ್ನು ಒಡೆಯಲು ಬಂದಿದ್ದಾರಾ ಎಂದು ಪ್ರಶ್ನಿಸಿದರು.