
ತಾರಕಕ್ಕೇರಿದ ರೂಪಾ-ರೋಹಿಣಿ ಜಗಳ; ಇಬ್ಬರಿಗೂ ನೋಟಿಸ್ ನೀಡಲು ಸೂಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ರಾಜ್ಯದ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳ ತಾರಕಕ್ಕೇರಿದ್ದು, ಇದರಿಂದ ಮುಜುಗುರಕ್ಕೀಡಾದ ರಾಜ್ಯ ಸರಕಾರ, ಈಗ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ನಿನ್ನೆಯಿಂದ ಮಾಧ್ಯಮಗಳಲ್ಲಿ ಈ ಉನ್ನತ ಅಧಿಕಾರಿಗಳ ಪೋಸ್ಟ್ ವಾರ್ ನಡೆಯುತ್ತಲೇ ಇದ್ದು, ಸರಕಾರದ ಮೇಲೆ ಇದು ದೊಡ್ಡ ಪರಿಣಾಮ ಬೀರುವ ಸಾಧ್ಯತೆಯ ಮಧ್ಯೆ ರಾಜ್ಯ ಬಿಜೆಪಿ ಸರಕಾರ, ಇಬ್ಬರಿಗೂ ನೊಟೀಸ್ ನೀಡಲು ಮುಂದಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇಬ್ಬರಿಗೂ ನೊಟೀಸ್ ನೀಡಲು ಮುಖ್ಯಮಂತ್ರಿ ಬೊಮ್ಮಾಯಿಯವರು ಸೂಚನೆ ನೀಡಿದ್ದಾರೆ ಎಂದರು.
ಇಂದು ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಜಗಳಕ್ಕಿಳಿದಿರುವ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ನೊಟೀಸ್ ನೀಡುವಂತೆ ಆದೇಶ ನೀಡಿದ್ದಾರೆ ಎಂದರು.
ಸರ್ಕಾರದ ಇಬ್ಬರು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳು ಈ ರೀತಿ ಬೀದಿರಂಪವಾಗಿ ಜಗಳ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಾಮಾನ್ಯ ಮನುಷ್ಯರು ಹಾದಿಮಧ್ಯೆ ಜಗಳ ಮಾಡುವಂತೆ ಇವರಿಬ್ಬರು ಈ ರೀತಿ ಸಾರ್ವಜನಿಕವಾಗಿ ಕಿತ್ತಾಡುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಇಬ್ಬರಿಗೂ ನೊಟೀಸ್ ನೀಡಲು ಸಿಎಂ ಸೂಚನೆ ನೀಡಿದ್ದಾರೆ ಎಂದರು.
ಇವರಿಬ್ಬರ ಜಗಳ ನಿನ್ನೆಯಿಂದ ಮಾಧ್ಯಮಗಳಲ್ಲಿ ಬರುತ್ತಿದ್ದು, ಇವರಿಬ್ಬರಿಗೆ ಭಿನ್ನಾಭಿಪ್ರಾಯಗಳಿದ್ದರೆ ಏನಾದರೂ ಮಾಡಿಕೊಳ್ಳಲಿ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕಾಗಿತ್ತು ಎಂದ ಅವರು, ಈ ರೀತಿ ಸಾರ್ವಜನಿಕವಾಗಿ ಕಿತ್ತಾಡಿಕೊಳ್ಳುವುದು ಸರಿಯಲ್ಲ, ಇದನ್ನು ನೋಡಿಕೊಂಡು ಸರಕಾರ ನಡೆಸುವ ನಾವು ಸುಮ್ಮನೆ ಕೂರುವುದಿಲ್ಲ, ಇಬ್ಬರಿಗೂ ನೊಟೀಸ್ ಜಾರಿ ಮಾಡಲಾಗುವುದು ಎಂದರು.