ಕಾರ್ಕಳ ಕ್ಷೇತ್ರ ಬಿಟ್ಟುಕೊಡುವಂತೆ ಪ್ರಮೋದ್ ಮುತಾಲಿಕ್ ಪಟ್ಟು; ಸಚಿವ ಸುನಿಲ್ ಕುಮಾರ್ ಕೊಟ್ಟ ತಿರುಗೇಟು ಏನು..?
ಬೆಂಗಳೂರು: ಕಾರ್ಕಳ ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಒತ್ತಾಯ ಮಾಡುತ್ತಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್'ಗೆ ಕಾರ್ಕಳ ಕ್ಷೇತ್ರದ ಶಾಸಕ, ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸುನಿಲ್ ಕುಮಾರ್, ಪ್ರಮೋದ್ ಮುತಾಲಿಕ್ ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಬಿಟ್ಟು ಯಾಕೆ ಹೊರಬಂದರು ಎಂಬುದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ಪ್ರಮೋದ್ ಮುತಾಲಿಕ್ ಅವರು ಹಿಂದುತ್ವದ ಹೆಸರಿನಲ್ಲಿ ಏಕೆ ಚುನಾವಣೆ ಬಯಸುತ್ತಿದ್ದಾರೆ ಎಂದು ತಾನು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದಿರುವ ಸುನಿಲ್ ಕುಮಾರ್, ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ ಎಂದಿದ್ದಾರೆ.
ಈ ಹಿಂದೆ ಅನಂತಕುಮಾರ್ ಹಾಗು ಪ್ರಹ್ಲಾದ್ ಜೋಶಿ ವಿರುದ್ಧವೂ ಪ್ರಮೋದ್ ಮುತಾಲಿಕ್ ಸ್ಪರ್ಧಿಸಿದ್ದು, ಆ ಚುನಾವಣೆಯ ಫಲಿತಾಂಶ ಏನಾಯ್ತು ಎಂಬುದು ಎಲ್ಲ ಜನರಿಗೂ ಗೊತ್ತಿರುವ ವಿಷಯ. ಈಗ ಮುತಾಲಿಕ್ ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದಾಗಿದೆ. ಮುತಾಲಿಕ್ ತೆಗೆದುಕೊಂಡಿರುವ ನಿರ್ಧಾರವನ್ನು ನಾನು ಏಕೆ ವಿರೋಧಿಸಲಿ ಎಂದು ಪ್ರಶ್ನಿಸಿದ್ದಾರೆ.
ಸುನೀಲ್ ಕುಮಾರ್ ಏನೆಂಬುದನ್ನು ಕಾರ್ಕಳ ಕ್ಷೇತ್ರದ ಜನತೆ ಈಗಾಗಲೇ ನೋಡಿದ್ದಾರೆ. ಮುಂದೆಯೂ ಅವರೇ ತೀರ್ಮಾನ ಮಾಡುತ್ತಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಮುತಾಲಿಕ್ ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ, ಮುಂದೆಯೂ ಮಾಡಬಹುದು. ಆದರೆ ನಾನು ಮುತಾಲಿಕ್'ಗೆ ಉತ್ತರ ನೀಡಲು ಹೋಗಲ್ಲ. ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುವುದಿಲ್ಲ ಎಂದಿದ್ದಾರೆ.