ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ನಲ್ಲಿ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಸುಳಿವು ನೀಡಿದ ಸ್ಟಿಕ್ಕರ್: ಮೂವರ ಬಂಧನ
ಬೆಂಗಳೂರು: ಇಲ್ಲಿನ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ನಲ್ಲಿ ಪ್ಲಾಸ್ಟಿಕ್ ಡ್ರಮ್ನೊಳಗೆ ಮಹಿಳೆ ಶವ ಪತ್ತೆ ಪ್ರಕರಣದ ರಹಸ್ಯ ಬೇಧಿಸಿರುವ ಪೊಲೀಸರು, ಮಿಂಚಿನ ಕಾರ್ಯಚರಣೆ ನಡೆಸಿ ಮೂವರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡ್ರಮ್ನಲ್ಲಿದ್ದ ಮಹಿಳೆ ಶವ ತಮನ್ನಾ ಎಂಬಾಕೆಯದ್ದು ಎಂಬುದನ್ನು ಪತ್ತೆಹಚ್ಚಿರುವ ಪೊಲೀಸರು, ಕೊಲೆಗೈದ ಆರೋಪಿಗಳನ್ನು ಬಂಧಿಸಿದ್ದು, ಕೆಲವರ ಹುಡುಕಾಟದಲ್ಲಿದ್ದಾರೆ.
ಶವ ದೊರೆತ ಡ್ರಮ್ ಮೇಲಿದ್ದ ಒಂದು ಸ್ಟಿಕ್ಕರ್ ಸುಳಿವಿನೊಂದಿಗೆ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮೂವರು ಕೊಲೆ ಆರೋಪಿಗಳನ್ನು ಹಿಡಿದಿದ್ದಾರೆ.
ಮೃತಳನ್ನು ಬಿಹಾರದ ಅರಾರಿಯಾ ಜಿಲ್ಲೆಯ ತಮನ್ನಾ (27) ಎಂದು ಗುರುತಿಸಲಾಗಿದ್ದು, ಈಕೆಯನ್ನು ಕೊಲೆಗೈದು ಡ್ರಮ್ ನಲ್ಲಿ ತುಂಬಿ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಇಟ್ಟು ಹೋಗಲಾಗಿತ್ತು.
ಈ ಕೊಲೆ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳು ಭಾಗಿಯಾಗಿದ್ದು, ಇವರೆಲ್ಲರೂ ಬಿಹಾರ ಮೂಲದವರಾಗಿದ್ದು, ಬೆಂಗಳೂರಿನ ಸಿಟಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಬಂಧಿತರನ್ನು ಕಮಾಲ್ (21) ತನ್ವೀರ್(24) ಹಾಗೂ ಶಾಕೀಬ್(25) ಸೇರಿ ಮೂವರನ್ನು ಬಂಧಿಸಿ ಉಳಿದವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳಾದ ನವಾಬ್ ಹಾಗೂ ಇಂತಿಕಾಬ್ ಸ್ವಂತ ಅಣ್ಣ-ತಮ್ಮರಾಗಿದ್ದಾರೆ. ಮದುವೆಯಾಗಿ ಪತಿಯನ್ನು ತೊರೆದಿದ್ದ ತಮನ್ನಾ ಕೆಲಸಮಯದ ಹಿಂದೆ ಇಂತಿಕಾಬ್ ನನ್ನು ಪುಸಲಾಯಿಸಿ ವಿವಾಹವಾಗಿದ್ದಳು. ಇದೇ ವಿಚಾರಕ್ಕೆ ಇಂತಿಕಾಮ್ ಮತ್ತು ಆತನ ಸಹೋದರರ ನಡುವೆ ಜಗಳವಾಗಿದ್ದು, ಇದಕ್ಕೆಲ್ಲಾ ತಮನ್ನಾ ಕಾರಣ ಎಂದು ನವಾಬ್ ಆಕ್ರೋಶಗೊಂಡು ಆಕೆಯ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಮಾ.12ರಂದು ಆರೋಪಿಗಳು ಕಲಾಸಿಪಾಳ್ಯ ದ ಮನೆಗೆ ತಮನ್ನಾಳನ್ನು ಊಟಕ್ಕೆ ಕರೆದಿದ್ದರು. ಊಟವಾದ ನಂತರ ಜಗಳ ಆರಂಭವಾಗಿದ್ದು,
ಈ ಜಗಳದಲ್ಲಿ ತಮ್ಮನ್ನಾಳನ್ನು ವೇಲ್‌ನಿಂದ ಬಿಗಿದು ಆರೋಪಿಗಳು ಕೊಲೆ ಮಾಡಿ, ಮೃತದೇಹವನ್ನು ಡ್ರಮ್ ನಲ್ಲಿಟ್ಟು ಬಿಹಾರಕ್ಕೆ ಸಾಗಿಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮನ್ನಾಳ ಶವ ಸಾಗಿಸಲು ಸಾಧ್ಯವಾಗದೇ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಶವ ಬಿಟ್ಟು ಆರೋಪಿಗಳು ಪರಾಗಿಯಾಗಿದ್ದರು. ಮಾ.14 ರಂದು ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಆವರಣದಲ್ಲಿ ಡ್ರಮ್‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಮೂರು-ನಾಲ್ಕು ಮಂದಿ ಆರೋಪಿಗಳು ಆಟೋದಲ್ಲಿ ಬಂದು ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಡ್ರಮ್‌ನಲ್ಲಿ ಶವವಿಟ್ಟು ಪರಾರಿಯಾಗಿದ್ದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಡ್ರಮ್ನ ಮೇಲಿದ್ದ ಒಂದು ಸ್ಟಿಕ್ಟರ್'ನಲ್ಲಿ ಆರೋಪಿ ಕಮಾಲ್ ಹೆಸರು ಮತ್ತು ವಿಳಾಸ ಪತ್ತೆಯಾಗಿತ್ತು. ಇದೇ ಸ್ಟಿಕ್ಕರ್ ಜಾಡುಹಿಡಿದು ಹೊರಟ ಪೊಲೀಸರು ಈಗ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.