ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರ 4 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು: ಮಿಂಚಿನ ಕಾರ್ಯಾಚರಣೆಯಲ್ಲಿ ಇಬ್ಬರ ಬಂಧನ
ಮಣಿಪಾಲ: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಮಾ.14ರಂದು ಮಧ್ಯಾಹ್ನ ಪ್ರಯಾಣಿಕ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್'ನಲ್ಲಿಟ್ಟಿದ್ದ 4.03ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಭದ್ರಾವತಿ ತಾಲೂಕಿನ ಹನುಮಂತ ನಗರದ ನಿವಾಸಿಗಳಾದ 41 ವರ್ಷದ ಲಲಿತಾ ಬೋವಿ ಹಾಗೂ 64 ವರ್ಷದ ಸುಶೀಲಮ್ಮ ಬೋವಿ ಎಂದು ಗುರುತಿಸಲಾಗಿದೆ.
ಕಾಪು ತಾಲೂಕಿನ ಕುತ್ತಾರು ಗ್ರಾಮದ ಪುನೀತ್ ವಸಂತ್ ಹೆಗ್ಡೆ ಅವರು ಮಾ.14ರಂದು ಮಧ್ಯಾಹ್ನ ತಮ್ಮ ಕುಟುಂಬದೊಂದಿಗೆ ಮುಂಬೈಗೆ ತೆರಳಲು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ಹತ್ತಿದ್ದರು. ಬಳಿಕ ಸೀಟ್ ಕುಳಿತು ಬ್ಯಾಗ್ ನೋಡಿದಾಗ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆ ಇಳಿದ ಪೊಲೀಸರು, ರೈಲ್ವೆ ಪೊಲೀಸರ ಸಹಕಾರದೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ 8 ಗಂಟೆಗಳೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕಳವಾದ 4.03 ಲಕ್ಷ ರೂ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.