ಹಾವೇರಿ, ಮಂಡ್ಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ, ಕಾರು ಚಾಲಕ, ಎಪಿಎಂಸಿ ಕಾರ್ಯದರ್ಶಿ
ಹಾವೇರಿ: ಹಾವೇರಿ ಮತ್ತು ಮಂಡ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಕಾರು ಚಾಲಕ ಹಾಗೂ ಎಪಿಎಂಸಿ ಕಾರ್ಯದರ್ಶಿ ಬಿದ್ದಿದ್ದಾರೆ.
ಹಾವೇರಿಯ ಜಿಲ್ಲೆಯ ರಾಣೆಬೆನ್ನೂರಲ್ಲಿ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಶಹರ ಪೊಲೀಸ್ ಠಾಣೆ PSI ಸುನೀಲ್ ತೇಲಿ ಹಾಗು ಅವರ ವಾಹನ ಚಾಲಕ ಸಚಿನ್ ಯಾಂಬಾತನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಫಿರೋಜ್ ಎಂಬುವರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಪಿಎಸ್ಐ ಸುನೀಲ್ ತೇಲಿ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದ್ದು, ಈ ಬಗ್ಗೆ ಫಿರೋಜ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ವೇಳೆ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಪೊಲೀಸರು, 40 ಸಾವಿರ ಲಂಚ ಪಡೆಯುವಾಗ ಲಂಚದ ಹಣ ಸಹಿತ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಇನ್ನೊಂದೆಡೆ ಮಂಡ್ಯದಲ್ಲಿ ಗೋದಾಮಿಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಮಳವಳ್ಳಿ ತಾಲೂಕಿನ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕಲ್ಕುಣಿ ಆನಂದ್ ಎಂಬವರು ಗೋದಾಮು ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಕೋರಿದ್ದು, ಅದಕ್ಕೆ ಸಾಕಮ್ಮ ಅವರು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.