ಇಂದಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕಾದರೆ ಅದು ಮಾಧ್ಯಮದಿಂದ ಮಾತ್ರ ಸಾಧ್ಯ: ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ

ಇಂದಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕಾದರೆ ಅದು ಮಾಧ್ಯಮದಿಂದ ಮಾತ್ರ ಸಾಧ್ಯ: ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವಕ್ಕೆ ಚಾಲನೆ 

ಉಡುಪಿ: ಇಂದಿನ ಭ್ರಷ್ಟ ವ್ಯವಸ್ಥೆಗೆ ವ್ಯಕ್ತಿಗಳು ಕಾರಣರಲ್ಲ, ಸಮಾಜವೇ ಕಾರಣ. ಇಂಥ ಭ್ರಷ್ಟ ವ್ಯವಸ್ಥೆಯ ಭಾವನೆಯನ್ನು ಬದಲಾಯಿಸಬೇಕಾದರೆ ಅದು ಮಾಧ್ಯಮದಿಂದ ಮಾತ್ರ ಸಾಧ್ಯ ಎಂದು  ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭಕ್ಕೆ ಉದ್ದನೆಯ ಪೆನ್ನಿನ ಕ್ಯಾಪ್ ತೆಗೆದು ಪತ್ರಕರ್ತರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.









ಸಮಾಜದಲ್ಲಿ ಭ್ರಷ್ಟ ವ್ಯವಸ್ಥೆ ಬಗ್ಗೆ ನಮ್ಮ ಮಧ್ಯೆಗಿರುವ ಭಾವನೆಯನ್ನು ಬದಲಾಯಿಸುವ ಕೆಲಸವನ್ನು ಮಾಧ್ಯಮಗಳಿಂದು ಅನಿವಾರ್ಯವಾಗಿ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಬದಲಾವಣೆಯಾದರೆ ಸಮಾಜದಲ್ಲಿ ಖಂಡಿತವಾಗಿ ಶಾಂತಿ, ಸೌಹಾರ್ದತೆ ಸೃಷ್ಟಿಯಾಗಲು ಸಾಧ್ಯ ಎಂದರು.

ಇಂದಿನ ಸಮಾಜ ಬರೀ ಶ್ರೀಮಂತಿಕೆ ಹಾಗು ಅಧಿಕಾರವನ್ನು ಪೂಜಿಸುವ ಸಮಾಜವಾಗಿದೆ. ಇಂದಿನ ಸಮಾಜದಲ್ಲಿ ಏನೆಲ್ಲ ಆಗುತ್ತಿದೆ ನೋಡಿ ಎಂದ ಸಂತೋಷ್ ಹೆಗ್ಡೆ, ಆರೋಪದ ಮೇಲೆ ಜೈಲಿಗೆ ಹೋಗಿ ಇನ್ನೂ ಖುಲಾಸೆಯಾಗದೆ ಜಾಮೀನು ತೆಗೆದುಕೊಂಡು ಹೊರಬರುವಂಥ ವ್ಯಕ್ತಿಗಳನ್ನು ಸ್ವಾಗತಿಸಲು ಇಂದಿನ ಸಮಾಜ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಹಾರ, ಸೇಬಿನ ಹಾರ ಹಾಕಿ ಸ್ವಾಗತಿಸುತ್ತಿದೆ. ಈ ರೀತಿ ಮಾಡುವ ಮೂಲಕ ಇಂದಿನ ಸಮಾಜದಲ್ಲಿ ನಾವು ಯುವಕ ಯುವತಿಯರಿಗೆ ಎಂಥಹ ಸಂದೇಶವನ್ನು ಕಳುಹಿಸುತ್ತಿದೇವೆ ಎಂಬುವುದನ್ನು ಅರಿತುಕೊಳ್ಳಬೇಕಾಗಿದೆ ಎಂದರು.









ಭ್ರಷ್ಟಾಚಾರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದೇ ನಿಜವಾದ ಪತ್ರಕರ್ತನೊಬ್ಬ ಮಾಡಬಹುದಾದ ಬಹು ದೊಡ್ಡ ದೇಶ ಸೇವೆಯಾಗಿದೆ. ಶ್ರೀಮಂತಿಕೆಯಿಂದ ಮಾತ್ರ ಅಧಿಕಾರ ಸಿಗುತ್ತದೆ ಎಂಬ ಭಾವನೆ ಸಮಾಜದಲ್ಲಿದ್ದು, ಸಮಾಜದಲ್ಲಿ ತಳವೂರಿರುವ ಇಂಥ ಭಾವನೆ ಬದಲಾಯಿಸಲು ಮಾಧ್ಯಮದಿಂದ ಮಾತ್ರ ಸಾಧ್ಯ ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ನೈಪುಣ್ಯತೆ ಹಾಗು ವೃತ್ತಿಪರತೆ ಅನೇಕ ರೀತಿಯ ಒತ್ತಡಗಳಿಂದ ನಲುಗುತ್ತಿದ್ದು, ಇಂಥ ಪರಿಸ್ಥಿತಿಯಲ್ಲಿ ಪತ್ರಕರ್ತರಿಂದ ಸಮಾಜ ಇನ್ನು ಹೆಚ್ಚಿನ ನಿರೀಕ್ಷೆ ಮಾಡುತ್ತಿದೆ. ನಾವು ಜನರ ಭರವಸೆಯನ್ನು ಕಳೆದುಕೊಳ್ಳದೇ, ವೃತ್ತಿಯಲ್ಲಿ ನಮಗೆ ಬದ್ದತೆ, ಜವಾಬ್ದಾರಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು. 








ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಸಂಘದ ಸ್ಥಾಪಕ ಉಪಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಈ ಸಂದರ್ಭದಲ್ಲಿ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಅವರ 'ನಮ್ಮ ಉಡುಪಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಸಂಘದ ಸ್ಥಾಪನ ಪ್ರಧಾನ ಕಾರ್ಯದರ್ಶಿ ಯು.ಎಸ್.ಶೆಣೈ ಅವರನ್ನು ಸನ್ಮಾನಿಸಲಾಯಿತು. ಸ್ಥಾಪಕ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನೂತನ ತಾಲೂಕು ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. 

ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಶಿರೂರು, ಜಿಲ್ಲಾ ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಉಪಸ್ಥಿತರಿದ್ದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ್ ಸುವರ್ಣ ವಂದಿಸಿದರು. ಕೆ.ಸಿ.ರಾಜೇಶ್ ಕಾರ್ಯ ಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article