ಸಂವಿಧಾನಕ್ಕೆ ವಿರುದ್ಧವಾಗಿ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ನಾವು ತೆಗೆದು ಹಾಕಿದ್ದೇವೆ: ಸಚಿವೆ ಶೋಭಾ ಕರಂದ್ಲಾಜೆ
ದಾವಣಗೆರೆ: ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ನೀಡುವಂತಿಲ್ಲ. ಆದರೆ ಕಾಂಗ್ರೆಸ್ ಹಾಗು ಜೆಡಿಎಸ್ ಸಂವಿಧಾನ ಬಾಹಿರವಾಗಿ ಮುಸ್ಲಿಮರಿಗೆ ಮೀಸಲಾತಿ ಕೊಟ್ಟದ್ದನ್ನು ನಾವು ತೆಗೆದು ಹಾಕಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ದಾವಣಗೆರೆಯಲ್ಲಿ ಹರ್ಬನ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಹಾಗು ಜೆಡಿಎಸ್ ಧರ್ಮದ ಆಧಾರದ ಮೇಲೆ ಮುಸ್ಲಿಂರಿಗೆ ಹೆಚ್ಚಿನ ಮೀಸಲಾತಿ ನೀಡಲಾಗಿತ್ತು. ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಧರ್ಮದ ಆಧಾರದಲ್ಲಿ ನೀಡುವಂತಿಲ್ಲ. ಜಾತಿ, ಹಿಂದುಳಿದವರು, ಸಮಸ್ಯೆ ಆಧರಿಸಿ ಮೀಸಲಾತಿ ನೀಡಬೇಕು. ಆದರೆ ಯಾವ ಮೀಸಲಾತಿಯನ್ನು ಸಂವಿಧಾನ ಬಾಹಿರವಾಗಿ ಕಾಂಗ್ರೆಸ್, ಜೆಡಿಎಸ್ ಅಲ್ಪಸಂಖ್ಯಾತರಿಗೆ ಕೊಟ್ಟದ್ದನ್ನು ನಾವು ತೆಗೆದು ಹಾಕಿದ್ದೇವೆ ಎಂದಿದ್ದಾರೆ.
ವೀರಶೈವ ಲಿಂಗಾಯತರು, ಒಕ್ಕಲಿಗರಿಗೆ ನಾವು ಮೀಸಲಾತಿಯನ್ನು ಹೆಚ್ಚಿಸಿದ್ದೇವೆ. ಅದೇ ರೀತಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ. ಇದೆಲ್ಲವನ್ನು ಸಂವಿಧಾನದ ಅಡಿಯಲ್ಲಿಯೇ ಮೀಸಲಾತಿ ನೀಡಲಾಗಿದೆ ಎಂದು ಒಳಮೀಸಲಾತಿಯನ್ನು ಸಮರ್ಥಿಸಿಕೊಂಡರು.