ಕಾಂಜಾವಾಲ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು: ನಾಲ್ವರ ವಿರುದ್ಧ ಕೊಲೆ ಆರೋಪ ದಾಖಲು
ನವದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 2023ರ ಮೊದಲ ದಿನವೇ 20 ವರ್ಷದ ಅಂಜಲಿ ಸಿಂಗ್ ಎಂಬ ಯುವತಿಯನ್ನು ಬಲಿ ಪಡೆದ ಕಾಂಜಾವಾಲ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಸುಮಾರು 800 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ದೆಹಲಿ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ರೋಹಿಣಿ ನ್ಯಾಯಾಲಯದಲ್ಲಿ ಶನಿವಾರ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಸುಮಾರು 120 ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ.
ಹೊಸ ವರ್ಷದ ದಿನದಂದು ದೆಹಲಿಯ ಕಾಂಜಾವಾಲದಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಕಾರಿನಡಿ ಸಿಲುಕಿದ್ದ 20 ವರ್ಷದ ಯುವತಿಯನ್ನು ಎಳೆದೊಯ್ದು ಹತ್ಯೆಗೈದ 4 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಆರೋಪ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 7 ಆರೋಪಿಗಳ ಪೈಕಿ ನಾಲ್ವರು ಆರೋಪಿಗಳಾದ ಅಮಿತ್, ಕ್ರಿಶನ್, ಮಿಥುನ್ ಹಾಗು ಮನೋಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ ಕೊಲೆ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ. ಇತರ 3 ಮಂದಿ ಆರೋಪಿಗಳಾದ ದೀಪಕ್, ಅಂಕುಶ್ ಹಾಗು ಅಶುತೋಷ್ ವಿರುದ್ಧ ಕ್ರಿಮಿನಲ್ ಪಿತೂರಿ ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಪ್ರಕರಣ ದಾಖಲಿಸಲಾಗಿದೆ.
ಕಾಂಜಾವಾಲ ಅಪಘಾತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಡಿಸೆಂಬರ್ 31ರ ರಾತ್ರಿ ಸುಲ್ತಾನಪುರಿಯಲ್ಲಿ ಸಂಭವಿಸಿದ ಭಯಾನಕ ರಸ್ತೆ ಅಪಘಾತದಲ್ಲಿ ಅಂಜಲಿ ಸಿಂಗ್ ಎಂಬ ಯುವತಿ ಸಾವನ್ನಪ್ಪಿದ್ದರು.