ಸರ್ಕಾರಿ ಸಂಸ್ಥೆಗಳು ಸೇರಿದಂತೆ 70 ಕೋಟಿ ಭಾರತೀಯರ ಡೇಟಾವನ್ನು ಕಳವು ಮಾಡಿದ್ದ ವ್ಯಕ್ತಿಯ ಬಂಧನ
ಹೈದರಾಬಾದ್: ಸುಮಾರು 70 ಕೋಟಿ ಭಾರತೀಯರ ವೈಯಕ್ತಿಕ ಡೇಟಾವನ್ನು ಕಳವು ಮಾಡಿರುವ ದೇಶದ ಅತೀ ದೊಡ್ಡ ಡಾಟಾ ಕಳವು ಪ್ರಕರಣವೊಂದನ್ನು ಸೈಬರಾಬಾದ್ ಪೊಲೀಸರು ಪತ್ತೆ ಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ವಿನಯ್ ಭಾರದ್ವಾಜ್ ಎಂದು ಗುರುತಿಸಲಾಗಿದ್ದು, ಈತನಿಂದ ಶಿಕ್ಷಣ-ತಂತ್ರಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳ ದತ್ತಾಂಶವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿನಯ್ ಭಾರದ್ವಾಜ್ ಬಳಿ ಬರೋಬ್ಬರಿ 24 ರಾಜ್ಯಗಳು ಹಾಗು ದೇಶದ 8 ಮಹಾನಗರಗಳಿಗೆ ಸೇರಿದ 70 ಕೋಟಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡೇಟಾ ಇತ್ತು ಎಂದು ಸೈಬರಾಬಾದ್ ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಜಿಎಸ್'ಟಿ, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಫಿನ್‌ಟೆಕ್ ಕಂಪನಿಗಳಂತಹ ಪ್ರಮುಖ ಸಂಸ್ಥೆಗಳ ಗ್ರಾಹಕರ ಮಾಹಿತಿಗಳೂ ಇವೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ವಿನಯ್ ಭಾರದ್ವಾಜ್ ಬಳಿ ಇರುವ ಕೆಲವು ಪ್ರಮುಖ ಮಾಹಿತಿಗಳಲ್ಲಿ ರಕ್ಷಣಾ ಸಿಬ್ಬಂದಿ, ಸರ್ಕಾರಿ ನೌಕರರು, ಪ್ಯಾನ್ ಕಾರ್ಡ್ ಹೊಂದಿರುವವರು, 9, 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಡಿ-ಮ್ಯಾಟ್ ಖಾತೆದಾರರು, ವಿವಿಧ ವ್ಯಕ್ತಿಗಳ ವಿವರಗಳು ಸೇರಿವೆ ಎಂದು ಹೇಳಲಾಗಿವೆ.
ಜೊತೆಗೆ ನೀಟ್ ವಿದ್ಯಾರ್ಥಿಗಳು, ಶ್ರೀಮಂತ ವ್ಯಕ್ತಿಗಳು, ವಿಮಾದಾರರು, ಕ್ರೆಡಿಟ್ ಕಾರ್ಡ್ ಹಾಗು ಡೆಬಿಟ್ ಕಾರ್ಡ್ ಹೊಂದಿರುವವರ ಡೇಟಾ ಹಾಗು ಮೊಬೈಲ್ ಸಂಖ್ಯೆಗಳು ಕೂಡ ಆರೋಪಿ ಬಳಿ ಇರುವುದು ಕಂಡು ಬಂದಿದೆ.
ಆರೋಪಿ ವಿನಯ್ ಭಾರದ್ವಾಜ್ ಬಳಿ ಇದ್ದ 2 ಮೊಬೈಲ್ ಫೋನ್‌ಗಳು ಮತ್ತು 2 ಲ್ಯಾಪ್‌ಟಾಪ್‌ಗಳು ಮತ್ತು ಸರ್ಕಾರಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ ನೂರಕ್ಕೂ ಹೆಚ್ಚು ವಿಭಾಗಗಳ ಡೇಟಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿನಯ್ ಭಾರದ್ವಾಜ್ ಹರಿಯಾಣದ ಫರಿದಾಬಾದ್‌ನಲ್ಲಿ “InspireWebz” ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಕ್ಲೌಡ್ ಡ್ರೈವ್ ಲಿಂಕ್ ಗಳ ಮೂಲಕ ಗ್ರಾಹಕರಿಗೆ ಡೇಟಾವನ್ನು ಕಳವು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.