ಬಹುರೂಪಿ ಹೆಣ್ಣು!!!
Wednesday, March 8, 2023
ಹೆಣ್ಣಿನ ಹುಟ್ಟೇ ಒಂದು ಸಂಭ್ರಮ
ತೊಟ್ಟಿಲಲಿ ನಗುವಳುವ ಸರಿಗಮ
ಕಿರುಬೆರಳ ಹಿಡಿದು ಕಲಿತ ಹೆಜ್ಜೆ
ಮನೆಮನದಲಿ ಹಾಡಾಗಿದೆ ಗೆಜ್ಜೆ.
ತೊಟ್ಟಿಲಲಿ ನಗುವಳುವ ಸರಿಗಮ
ಕಿರುಬೆರಳ ಹಿಡಿದು ಕಲಿತ ಹೆಜ್ಜೆ
ಮನೆಮನದಲಿ ಹಾಡಾಗಿದೆ ಗೆಜ್ಜೆ.
ಕಾಡಿಗೆ ಹೊಳಪಿನಲಿ ಅಕ್ಷಿ ಪಂಜರ
ಕಾಪಿಡುವುದು ನೀಳ ರೆಪ್ಪೆ ಚಪ್ಪರ
ನೋವಲದ್ದಿದ ನಗುವ ನವ ಬಣ್ಣ
ಕಿವಿಯ ಚುಚ್ಚಿ ಕುಳಿತಿದೆ ಹೊಸಚಿನ್ನ.
ಬಾಚಿ ಹೆಣೆದ ರೇಶಿಮೆಯ ಕೂದಲು
ಬಳುಕುತಿದೆ ಮಲ್ಲಿಗೆಯ ಗೊಂಚಲು
ಬಣ್ಣಬಣ್ಣದ ಬಳೆಗಳ ನೀನು ತೊಟ್ಟೆ
ಮನೆಯಂಗಳದಿ ನಲಿವ ಚಿಕ್ಕ ಚಿಟ್ಟೆ.
ಶಾಲೆಗೆ ಹೋಗಾಯ್ತು ಪುಟ್ಟ ಕಾಲು
ಆಟ ಪಾಠಗಳಲ್ಲೂ ನೀನೇ ಮೇಲು
ತನುವಲಿ ಮನವನು ತುಂಬಿಕೊಂಡು
ದೊಡ್ಡದಾದೆ ನೀಲ ಬಾನಿನ ಚೆಂಡು.
ಜೀವಾಕ್ಷರಗಳನ್ನು ಎದೆಯೊಳಗಿಟ್ಟು
ವಿಶ್ವ ಶಿಕ್ಷಣದ ಬಾಗಿಲುಗಳ ತಟ್ಟು
ಅವಕಾಶಗಳ ಹಸಿರು ಬಯಲಿನಲ್ಲಿ
ಬಾಚಿಕೊಂಡೆ ಬಳೆತೊಟ್ಟ ಕರಗಳಲ್ಲಿ.
ಕ್ಷಮೆ,ಸಹನೆ,ಮಮತಾಮಯಿ ನೀನು
ರುದ್ರಕಾಳಿ,ಮಹಾಮಾರಿ ಶಕ್ತಿ ನೀನು
ನವಿಲ್ಗರಿಯ ಸುಂದರ ಬಣ್ಣ ನೀನು
ಸಿಡಿಲಾರ್ಭಟದ ಕರ್ಕಶ ಸದ್ದು ನೀನು
ಬಸಿರ ಹೊತ್ತ ಭವದ ಅನುಭಾವಿ
ಸೃಷ್ಟಿ ಶಕ್ತಿಯ ಅದ್ಭುತ ರಸಾನುಭವಿ
ಎದೆಯ ಗೂಡಲಿ ಅಮೃತ ಕಳಶವು
ನಿನ್ನಿಂದಲೇ ಈ ಜೀವಾನುಕೋಶವು.
ವಿಶ್ವ ಮಹಿಳಾ ದಿನದ ಶುಭಾಶಯಗಳು
ಉಷಾ.ಎಂ