ಮುಸ್ಲಿಮರೇ ನಿರ್ಮಿಸಿರುವ ಮೂಲ್ಕಿ ಬಪ್ಪನಾಡು ದೇವಸ್ಥಾನದ ಜಾತ್ರೆಯಲ್ಲಿ ಈ ಬಾರಿಯೂ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ!
ಮೂಲ್ಕಿ: ಸುಮಾರು 800 ವರ್ಷಗಳ ಇತಿಹಾಸ ಇರುವ ದಕ್ಷಿಣ ಭಾರತದ ಸೌಹಾರ್ದದ ಕೊಂಡಿ ಎಂದೇ ಪ್ರಸಿದ್ಧಿ ಪಡೆದಿದ್ದ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಈ ಬಾರಿಯೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ನಿಷೇಧ ಹೇರಲಾಗಿದೆ.
ಏಪ್ರಿಲ್ 5ರಂದು ಬಪ್ಪನಾಡು ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ ನಡೆದು ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಡೆಸುವುದಕ್ಕೆಂದು ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನಿರಾಕರಿಸಲಾಗಿದ್ದು, ಅವರನ್ನು ಹಿಂದೆ ಕಳುಹಿಸಲಾಗಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಮುಸ್ಲಿಮನೊಬ್ಬ ಕಟ್ಟಿಸಿದ್ದನ್ನು ಇತಿಹಾಸ ಸಾರಿಸಾರಿ ಹೇಳುತ್ತಿದ್ದರೂ, ಸಂಘಪರಿವಾರದ ಸಂಘಟನೆಗಳು ಮುಸ್ಲಿಮರ ವಿರುದ್ಧ ದ್ವೇಷದ ಸಮರಸಾರಿದ್ದು, ಇದರ ಭಾಗವಾಗಿ ಈ ಬಾರಿಯೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ನಿಷೇಧ ಹೇರಲಾಗಿದೆ.
ಸುಮಾರು 800 ವರ್ಷಗಳ ಹಿಂದೆ ಬಪ್ಪಬ್ಯಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವರಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ಒಲಿದಿದ್ದು, ಬಳಿಕ ದೇವಿಯ ಸೂಚನೆಯಂತೆ ಬಪ್ಪಬ್ಯಾರಿ ಮುಲ್ಕಿಯಲ್ಲಿ ದುರ್ಗಾಪರಮೇಶ್ವರಿ ಅಮ್ಮನವರಿಗೆ ದೇವಸ್ಥಾನವನ್ನು ನಿರ್ಮಿಸಿ ಕೊಟ್ಟರು ಎಂಬುದು ಮುಲ್ಕಿ ಬಪ್ಪನಾಡು ದೇವಸ್ಥಾನದ ಇತಿಹಾಸ ಹೇಳುತ್ತದೆ.
ಈ ಹಿಂದಿನಿಂದಲೂ ಬಪ್ಪನಾಡು ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಪ್ಪಬ್ಯಾರಿ ಅವರ ಕುಂಬಸ್ಥರಿಗೆ ಪ್ರಥಮವಾಗಿ ದೇವರ ಪ್ರಸಾದವನ್ನು ನೀಡಿದ ಬಳಿಕವೇ ಜಾತ್ರಾಮಹೋತ್ಸವಕ್ಕೆ ಧ್ವಜಾರೋಹಣ ನಡೆಯುವುದು ಇಲ್ಲಿನ ಪದ್ದತಿ. ಆದರೆ ಕಳೆದೆರಡು ವರ್ಷಗಳಿಂದ ಸಂಘಪರಿವಾರದ ಸಂಘಟನೆಗಳು ಮುಸ್ಲಿಂ ಬಡ ವ್ಯಾಪಾರಿಗಳಿಗೆ ನಿರ್ಬಂಧವೇರಿದ್ದು, ಇದರಿಂದ ಈ ಬಾರಿಯೂ ವ್ಯಾಪಾರ ನಿರಾಕರಿಸಲಾಗಿದೆ.