ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಬಿಜೆಪಿ ಕಸರತ್ತು; ಸೋಮವಾರ ಅಥವಾ ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬೊಮ್ಮಾಯಿ
ನವದೆಹಲಿ: ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಬಿಜೆಪಿ ಕಸರತ್ತು ಮುಂದುವರಿಸಿದ್ದು, ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಮಾತುಕತೆ ಮುಂದುವರಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂಬಂಧ ಬಿಜೆಪಿ ವರಿಷ್ಠರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಈ ಕುರಿತು ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಒಂದು ಹಂತದ ಮಾತುಕತೆ ನಡೆದಿದ್ದು, ನಾಳೆ ಮತ್ತೆ ಮಾತುಕತೆ ಮುಂದುವರಿಯುತ್ತದೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ ಯಾವ ಭಾಗದಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಗೊಂದಲ, ಕಗ್ಗಂಟು ಇಲ್ಲ, ಈ ಬಗ್ಗೆ ನಾಳೆ ಒಂದು ಸ್ಪಷ್ಟ ಚಿತ್ರಣ ಹೊರಬರಲಿದ್ದು, ಈಗಿರುವ 20ಕ್ಕೂ ಹೆಚ್ಚು ಶಾಸಕರ ಟಿಕೆಟ್ ಕೈತಪ್ಪಿಹೋಗಲಿದೆ ಎಂಬುದೆಲ್ಲ ಊಹಾಪೋಹಗಳಷ್ಟೆ, ಈಗಾಗಲೇ 2 ಬಾರಿ ಚರ್ಚೆಯಾಗಲಿದ್ದು, ಅದರ ಫಲಶ್ರುತಿ ನಾಳೆ ಹೊರಬರಲಿದೆ. ನಾಳೆ ಸಂಸದೀಯ ಮಂಡಳಿ ಸಭೆ ನಡೆದ ಬಳಿಕ ಸೋಮವಾರ ಅಥವಾ ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದರು.