ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು, ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ?: ರಾಜ್ಯಕ್ಕೆ ಬಂದ ಮೋದಿಗೆ ಪ್ರಶ್ನೆಯ ಸುರಿಮಳೆಗೈದ ಸಿದ್ದರಾಮಯ್ಯ

ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು, ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ?: ರಾಜ್ಯಕ್ಕೆ ಬಂದ ಮೋದಿಗೆ ಪ್ರಶ್ನೆಯ ಸುರಿಮಳೆಗೈದ ಸಿದ್ದರಾಮಯ್ಯ

ಬೆಂಗಳೂರು: ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು, ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ಎಂದು ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ರವಿವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ ನದ್ದು, ಬಂದರು, ಏರ್ ಪೋರ್ಟ್ ನುಂಗಿದ್ದ ಅದಾನಿ ಗುಜರಾತ್ ನವರು, ಈಗ KMF ನುಂಗಲು ಹೊರಟಿರುವ ಅಮುಲ್ ಕೂಡ ಗುಜರಾತ್ ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ? 

ಈ ಗುಜರಾತಿ ಆಕ್ರಮಣ ಇನ್ನು ಸಹಿಸಲು ಸಾಧ್ಯ ಇಲ್ಲ, ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಗೌರವಪೂರ್ವಕವಾಗಿ ನಿಲ್ಲಿಸಿ, ಕನ್ನಡಿಗರ ನಾಡಪ್ರೇಮ, ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ, ಪರಿಣಾಮ ನೆಟ್ಟಗಾಗದು..! ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಅಮುಲ್ ಜೊತೆ KMF ವಿಲೀನದ ಪ್ರಸ್ತಾವ ಮಾಡಿದ ದಿನದಿಂದ ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳ ಮೇಲೆ ಪ್ರಹಾರ ಶುರುವಾಗಿದೆ, ಏನಿದು ನಿಮ್ಮ ಕರಾಮತ್ತು? ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಿಂದ ನಂದಿನಿ ಹಾಲು ಮತ್ತಿತರ ಉತ್ಪನ್ನಗಳು ಮಾಯವಾಗುತ್ತಿವೆ. ಗುಜರಾತ್ ನಿಂದ ನೀವು ಕಳುಹಿಸುತ್ತಿರುವ ಅಮುಲ್ ಹಾಲು ಹಾಗು ಉತ್ಪನ್ನಗಳ ಮಾರಾಟದ ಬಿರುಸು ಹೆಚ್ಚಾಗಿದೆ. ಇವೆಲ್ಲವೂ ಸಹಜ ಬೆಳವಣಿಗೆಯೇ? ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಭರವಸೆ ನೀಡಿದಂತೆ ಯುವಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡಲಿಲ್ಲ, ಬದಲಿಗೆ ನಮ್ಮ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳಲ್ಲಿನ ಕನ್ನಡಿಗರ ಉದ್ಯೋಗಗಳನ್ನು ಕಿತ್ತುಕೊಂಡಾಯಿತು. ಈಗ ರೈತರ ಹೊಟ್ಟೆಗೆ ಹೊಡೆಯುವ ಹುನ್ನಾರವೇ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Ads on article

Advertise in articles 1

advertising articles 2

Advertise under the article