2ನೇ ಪಟ್ಟಿಯಲ್ಲಿ ಬಿಜೆಪಿಯ ಎಂಪಿ ಕುಮಾರಸ್ವಾಮಿ, ಮಾಡಾಳ್, ಸುಕುಮಾರ ಶೆಟ್ಟಿ ಸೇರಿದಂತೆ 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ; ಬಿಜೆಪಿಗೆ ಬಂಡಾಯದ ಬಿಸಿ
ನವದೆಹಲಿ: ಈ ಬಾರಿಯ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿ ಬುಧವಾರ ರಾತ್ರಿ ಬಿಡುಗಡೆ ಮಾಡಿದ್ದು, 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಇದು ಬಿಜೆಪಿಗೆ ಮತ್ತಷ್ಟು ಸಂಕಷ್ಟ ತರುವ ಸಾಧ್ಯತೆ ಇದೆ.
ಮೊದಲ ಪಟ್ಟಿ ಬಿಡಗುಗಡೆಯಿಂದ ಕೈ ತಪ್ಪಿರುವ ಟಿಕೆಟ್ ವಂಚಿತರು ಬಂಡಾಯದ ಕಹಳೆ ಮೊಳಗಿಸಿದ್ದು, ಈಗ 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವುದು ಬಿಜೆಪಿ ವಿರುದ್ಧ ಮತ್ತಷ್ಟು ದೊಡ್ಡಮಟ್ಟದಲ್ಲಿ ಅಸಮಾಧಾನ, ಬಂಡಾಯವೇಳುವ ಲಕ್ಷಣಗಳು ಗೋಚರಿಸುತ್ತಿವೆ.
ಇತ್ತೀಚೆಗೆ ಲಂಚ ಹಗರಣವೊಂದರಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಈ ಕ್ಷೇತ್ರದಿಂದ ಶಿವಕುಮಾರ್ ಎಂಬವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಮಾಡಾಳ್ ವಿರೂಪಾಕ್ಷಪ್ಪ ಶಾಕ್'ಗೊಳಗಾಗಿದ್ದಾರೆ.
ಇನ್ನೊಂದೆಡೆ ಮೂಡಿಗೆರೆ ಹಾಲಿ ಶಾಸಕ ಎಂಪಿ ಕುಮಾರಸ್ವಾಮಿಗೂ ಟಿಕೆಟ್ ಕೈತಪ್ಪಿದ್ದು, ಮೂಡಿಗೆರೆಯಲ್ಲಿ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ.
ಬೈಂದೂರು ಕ್ಷೇತ್ರದಲ್ಲಿ ನಿನ್ನೆ ರಾತ್ರಿಯಿಂದಲೇ ಹಾಲಿ ಶಾಸಕ ಪರ ಬ್ಯಾಟಿಂಗ್ ನಡೆಸಿರುವ ಅವರ ಅಭಿಮಾನಿಗಳು ಹಾಗು ಬಿಜೆಪಿ ಕಾರ್ಯಕರ್ತರು ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಿದರೆ ರಾಜೀನಾಮೆ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದು, ಇದಾವುದಕ್ಕೂ ಕ್ಯಾರೇ ಅನ್ನದ ಬಿಜೆಪಿ ಹೈಕಮಾಂಡ್ ಸುಕುಮಾರ್ ಶೆಟ್ಟಿಗೆ ಟಿಕೆಟ್ ನೀಡಿಲ್ಲ. ಅವರ ಬದಲಿಗೆ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೇಟ್ ನೀಡಿದೆ. ಇದು ಬೈಂದೂರು ಬಿಜೆಪಿಯಲ್ಲಿ ದೊಡ್ಡಮಟ್ಟದ ಬಂಡಾಯ ಏಳಲು ಕಾರಣವಾಗುವ ಸಾಧ್ಯತೆಯಿದೆ.
ಹಾವೇರಿಯಲ್ಲಿ ಹಾಲಿ ಶಾಸಕ ನೆಹರೂ ಓಲೇಕಾರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಗವಿಸಿದ್ದಪ್ಪ ದ್ಯಾಮಣ್ಣನವರ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾಯಕೊಂಡ ಹಾಲಿ ಶಾಸಕ ಪ್ರೊ.ಲಿಂಗಣ್ಣಗೆ ಟಿಕೆಟ್ ತಪ್ಪಿದ್ದು, ಬಸವರಾಜ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಲಘಟಗಿಯಲ್ಲಿ ಹಾಲಿ ಶಾಸಕ ನಿಂಬಣ್ಣನವರ್ ಟಿಕೆಟ್ ನೀಡದೆ ನಾಗರಾಜ್ ಛಬ್ಬಿ ಅವರಿಗೆ ಟಿಕೆಟ್ ನೀಡಲಾಗಿದೆ.