ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಬಂದಿದ್ದ ಯುವತಿಯರಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ ಆಯೋಜಕರು; ಹಲವು ಮಂದಿ ಯುವತಿಯರು ಗರ್ಭಿಣಿ!
ಭೋಪಾಲ್: ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಲು ಬಂದಿದ್ದ 5 ಮಂದಿ ಯುವತಿಯರು ಗರ್ಭಿಣಿಯರಾಗಿರುವ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದ 'ಮುಖ್ಯಮಂತ್ರಿ ಕನ್ಯಾ ವಿವಾಹ' ಯೋಜನೆಯಡಿಯಲ್ಲಿ ವಿವಾಹವಾಗಲು ಆಯ್ಕೆಯಾದ ವಧುಗಳಿಗೆ ಮದುವೆಗೆ ಮುಂಚೆ ಗರ್ಭಧಾರಣೆ ಪರೀಕ್ಷೆ ನಡೆಸಲಾಗಿದೆ ಎಂಬುವುದು ಈಗ ವಿವಾದದ ಸ್ವರೂಪ ಪಡೆದಿದೆ. ವಿಶೇಷವೆಂದರೆ ಈ ಯೋಜನೆಯಲ್ಲಿ ಮದುವೆಯಾಗಲು ಬಂದಿದ್ದ 5 ಮಂದಿ ಯುವತಿಯರು ಗರ್ಭಿಣಿಯರಾಗಿರುವ ವಿಷಯ ಹೊರಬಿದ್ದಿದೆ.
ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ 220 ಬಾಲಕಿಯರ ಸಾಮೂಹಿಕ ವಿವಾಹವನ್ನು ಶನಿವಾರ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗಡ್ಸರಾಯ್ ಪ್ರದೇಶದಲ್ಲಿ ಆಯೋಜಿಸಲಾಗಿತ್ತು. ಗರ್ಭಧಾರಣೆ ಪರೀಕ್ಷೆ ಅಂಗವಾಗಿ ಮೂತ್ರ ಪರೀಕ್ಷೆಯ ಫಲಿತಾಂಶದ ಪ್ರಕಾರ 5 ಹೆಣ್ಣುಮಕ್ಕಳು ಗರ್ಭಿಣಿಯಾಗಿರುವುದರಿಂದ ಅವರ ವಿವಾಹವನ್ನು ನೆರವೇರಿಸಲಾಗಿಲ್ಲ ಎಂದು ತಿಳಿದುಬಂದಿದೆ. ಇದೀಗ ಮದುವೆಯಾಗದ ಯುವತಿಯರು ಇದೀಗ ಕಾರ್ಯಕ್ರಮ ಆಯೋಜಕರ ವಿರುದ್ಧ ತಿರುಗಿಬಿದ್ದಿದ್ದಾರೆ.
‘ನಾನು ಮದುವೆಗೆ ಎಲ್ಲ ರೀತಿಯ ತಯಾರಿ ನಡೆಸಿದ್ದೆ. ಆದರೆ, ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ. ನಾನು ಮದುವೆಯಾಗುವ ವ್ಯಕ್ತಿಯೊಡನೆ ವಾಸಿಸುತ್ತಿದ್ದೇನೆ. ವೈದ್ಯಕೀಯ ಪರೀಕ್ಷೆ ವೇಳೆ ನಾನು ಗರ್ಭಿಣಿಯಾಗಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ನನ್ನ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ‘ ಎಂದು ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಆಯ್ಕೆಯಾಗಿ ಕೊನೆಗೆ ತಿರಸ್ಕೃತರಾದ ವಧುವೊಬ್ಬರು ಹೇಳಿದ್ದಾರೆ.
ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಪ್ರಯೋಜನವಾಗುವಂತೆ ಈ ಯೋಜನೆಯನ್ನು ತಂದಿದ್ದು, ಸಾಮೂಹಿಕ ವಿವಾಹವಾದ ದಂಪತಿಗಳಿಗೆ ನಗದು ಮತ್ತು ಗೃಹಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ. ಇದೇ ಕಾರಣಕ್ಕಾಗಿ ನೂರಾರು ಕನ್ಯೆಯರು ವಿವಾಹ ನೋಂದಣಿ ಮಾಡಿಸಿದ್ದು, ಇದೀಗ ಈ ಕಾರ್ಯಕ್ರಮ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.