ಬಿಜೆಪಿ ಆಡಳಿತದಿಂದ ರೋಸಿ ಹೋಗಿರುವ ಜನಸಾಮಾನ್ಯರು ಈ ಬಾರಿ ಬದಲಾವಣೆ ಬಯಸಿದ್ದಾರೆ: ಇನಾಯತ್ ಅಲಿಯಿಂದ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ
ಮಂಗಳೂರು(Headlines Kannada): ಮಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದೆ. ಇನಾಯತ್ ಅಲಿ ಪ್ರಚಾರದಲ್ಲಿ ಯುವಕರ ದಂಡೇ ಸಾಥ್ ನೀಡುತ್ತಿದ್ದು, ಪ್ರಚಾರಕ್ಕೆ ಇನ್ನಷ್ಟು ಮೆರುಗು ತಂದಿದೆ.
ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ಇನಾಯತ್ ಅಲಿ ಅವರು, ಮುಕ್ಕ, ಸುರತ್ಕಲ್, ಕಾಟಿಪಳ್ಳ, ಕೈಕಂಬ, ಗಣೇಶಪುರ, ಕೃಷ್ಣಾಪುರ ಪರಿಸರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇನಾಯತ್ ಅಲಿ, ಜನರ ಒಳಿತಿಗಾಗಿ, ಅಭಿವೃದ್ಧಿ ಕಾರ್ಯಕ್ಕಾಗಿ ಈ ಬಾರಿ ನನಗೆ ಆಶೀರ್ವಾದ ನೀಡಿ. ಈ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಆಡಳಿತಾರೂಢ ಬಿಜೆಪಿಯ ದುರಾಡಳಿತದಿಂದ ಜನ ರೋಸಿ ಹೋಗಿದ್ದು, ಮತದಾರ ಈ ಬಾರಿ ಬದಲಾವಣೆಯನ್ನು ಬಯಸಿದ್ದಾನೆ. ಪ್ರಚಾರದ ವೇಳೆ ಸೇರುತ್ತಿರುವ ಮತದಾರರೇ ಇದಕ್ಕೆ ಸಾಕ್ಷಿ. ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಕೇವಲ ಅಧಿಕಾರದಲ್ಲಿದ್ದು ಹಣ ಮಾಡುವುದೇ ಮುಖ್ಯವಾಗಿದೆ ಎಂದು ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.
ಸೋಮವಾರ ಬೆಳಗ್ಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು, ಮುಕ್ಕ ಸಮೀಪದ ಮಿತ್ರಪಟ್ಟಣದ ಶ್ರೀರಾಮ ಭಜನಾ ಮಂದಿರಕ್ಕೆ, ಮುಕ್ಕದಲ್ಲಿರುವ ಧೂಮವತಿ ಭಂಟ ಭಂಡಾರ ಮನೆಯ ದೈವಸ್ಥಾನಕ್ಕೆ ಭೇಟಿ ನೀಡಿದರು.
ಸುರತ್ಕಲ್ ನ ಬಾಳಿಕೆ ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ, ಶ್ರೀ ರಾಮಾಂಜನೇಯ ಸೇವಾ ಮಂದಿರಕ್ಕೆ, ಕಾಟಿಪಳ್ಯದ ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಕೈಕಂಬದ ಗಣೇಶಪುರದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತ ನವೀನ್ ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಿದರು.
ಕೈಕಂಬದ ಗಣೇಶಪುರ ವ್ಯಾಪ್ತಿಯ ಮನೆಗಳಿಗೆ ತೆರಳಿ ಕಾಂಗ್ರೆಸ್ ನ ನಾಲ್ಕು ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದ ಇನಾಯತ್ ಅಲಿ, ಕೃಷ್ಣಾಪುರ 4ನೇ ಬ್ಲಾಕ್'ನಲ್ಲಿ ಸಾರ್ವಜನಿಕ ಸಭೆ ನಡೆಸಿ ಬಿಜೆಪಿ ವಿರುದ್ಧ ಮತದಾರರು ಜಾಗೃತರಾಗುವಂತೆ ಹಾಗು ತನಗೆ ಮತ ನೀಡುವಂತೆ ಮನವಿ ಮಾಡಿದರು.
ಚುನಾವಣಾ ಪ್ರಚಾರದ ವೇಳೆ ಕಾಟಿಪಳ್ಯದಲ್ಲಿರುವ ಇನ್ಫೆಂಟ್ ಮೇರಿ ಚರ್ಚ್ ಗೆ ಭೇಟಿ ನೀಡಿ, ಅಲ್ಲಿನ ಫಾದರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಕಾಟಿಪಳ್ಳದ ಕಾಂಗ್ರೆಸ್ ಕಾರ್ಯಕರ್ತ ಪಿ.ಕೆ.ಅಬ್ದುಲ್ ರೆಹಮಾನ್ ಅವರ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಕೃಷ್ಣಾಪುರದಲ್ಲಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಕವಿತಾ ಸನಿಲ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಮತ್ತಿತರರು ಮತ ಯಾಚನೆ ವೇಳೆ ಜೊತೆಗಿದ್ದರು.