‘ಟೈಮ್’ ಮ್ಯಾಗಜಿನ್ನ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ಗೆ ನಂಬರ್ 1 ಸ್ಥಾನ !
ಮುಂಬೈ: ಬಾಲಿವುಡ್ ಕಿಂಗ್ ಖಾನ್ ನಟ ಶಾರುಖ್ ಖಾನ್ ಅವರ ಅಭಿಮಾನಿಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಇದ್ದಾರೆ. ಇದೇ ಕಾರಣಕ್ಕಾಗಿ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅವರಿಗೆ ನಂಬರ್ ಒನ್ ಪಟ್ಟ ಸಿಕ್ಕಿದೆ.
ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಶಾರುಖ್ ಖಾನ್ ಎಷ್ಟು ಪ್ರಭಾವಿ ಎಂಬುವುದು ಜಗಜ್ಜಾಹಿರವಾಗಿದೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ ಮ್ಯಾಗಜಿನ್ನ ಓದುಗರ ಸಮೀಕ್ಷೆಯಲ್ಲಿ ಈ ಫಲಿತಾಂಶ ಹೊರಬಿದ್ದಿದೆ.
ಸಿನಿಮಾ, ರಾಜಕೀಯ, ಉದ್ಯಮ, ಕ್ರೀಡೆ, ಸಾಮಾಜಿಕ ಕಾರ್ಯ ಮುಂತಾದ ಕ್ಷೇತ್ರಗಳ ಘಟಾನುಘಟಿಗಳನ್ನೂ ಮೀರಿಸುವ ಮೂಲಕ ಶಾರುಖ್ ಖಾನ್ ನಂಬರ್ ಒನ್ ಆಗಿದ್ದಾರೆ. 2023ರ ವರ್ಷ ಅವರ ಪಾಲಿಗೆ ಸಖತ್ ಆಶಾದಾಯಕ ಆಗಿದ್ದು, ಅವರು ನಟಿಸಿದ ‘ಪಠಾಣ್’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ. ಈ ಸಿನೆಮಾ ಮೂಲಕ ವಿಶ್ವಮಟ್ಟದಲ್ಲಿ ಅವರ ಖ್ಯಾತಿ ಹೆಚ್ಚಾಗಿದೆ.
‘ಟೈಮ್’ ಮ್ಯಾಗಜಿನ್ನ 12 ಲಕ್ಷಕ್ಕೂ ಅಧಿಕ ಓದುಗರು ವೋಟ್ ಮಾಡಿದ್ದು, 100 ಪ್ರಭಾವಿ ವ್ಯಕ್ತಿಗಳಲ್ಲಿ ಯಾವ ಸೆಲೆಬ್ರಿಟಿಯು ಎಷ್ಟನೇ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂಬುದನ್ನು ‘ಟೈಮ್’ ಮ್ಯಾಗಜಿನ್ನ ಓದುಗರ ಸಮೀಕ್ಷೆಯ ಮೂಲಕ ನಿರ್ಧರಿಸಲಾಗಿತ್ತು. ಇದರಲ್ಲಿ ಶೇ.4ರಷ್ಟು ಹೆಚ್ಚು ಓದುಗರು ಶಾರುಖ್ ಖಾನ್ಗೆ ವೋಟ್ ಹಾಕಿದ್ದು, ಅವರು ನಂಬರ್ ಸ್ಥಾನ ಅಲಂಕರಿಸಿದ್ದಾರೆ.
ಆಸ್ಕರ್ ವಿಜೇತ ನಟಿ ಮಿಶಾಲ್ ಯೋ, ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಮೆಟಾ ಸಿಇಓ ಮಾರ್ಕ್ ಝಕರ್ಬರ್ಗ್ ಮುಂತಾದವರನ್ನು ಬಾಲಿವುಡ್ ನಟ ಶಾರುಖ್ ಖಾನ್ ಹಿಂದಿಕ್ಕಿದ್ದರೆ, ಇನ್ನೊಂದೆಡೆ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು 5ನೇ ಸ್ಥಾನದಲ್ಲಿದ್ದಾರೆ.
ಶಾರುಖ್ ಖಾನ್ ಅವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಇದು ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ತಂದಿದೆ.