ಬಿಜೆಪಿಗೆ ಗುಡ್ ಬೈ ಹೇಳಿದ ಜಗದೀಶ್ ಶೆಟ್ಟರ್: ರವಿವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ,  ಶಾಸಕ ಸ್ಥಾನಕ್ಕೆ ರಾಜೀನಾಮೆ; ಬೊಮ್ಮಾಯಿ, ಜೋಶಿ, ಧರ್ಮೇಂದ್ರ ಪ್ರಧಾನ್ ನಡೆಸಿದ ಸಂಧಾನ ಸಭೆ ವಿಫಲ

ಬಿಜೆಪಿಗೆ ಗುಡ್ ಬೈ ಹೇಳಿದ ಜಗದೀಶ್ ಶೆಟ್ಟರ್: ರವಿವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ; ಬೊಮ್ಮಾಯಿ, ಜೋಶಿ, ಧರ್ಮೇಂದ್ರ ಪ್ರಧಾನ್ ನಡೆಸಿದ ಸಂಧಾನ ಸಭೆ ವಿಫಲ

ಹುಬ್ಬಳ್ಳಿ: ಆಡಳಿತರೂಢ ಬಿಜೆಪಿಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗುತ್ತಲೇ ಇದ್ದು, ಈಗ ಬಿಜೆಪಿಯ ಮತ್ತೊಂದು ದೊಡ್ಡ ವಿಕೆಟ್ ಪತನವಾಗಿದೆ. ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಟರೊಂದಿಗೆ ಮುನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಶನಿವಾರ ರಾತ್ರಿ ಘೋಷಿಸಿದ್ದಾರೆ.

ಶನಿವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಧರ್ಮೇಂದ್ರ ಪ್ರಧಾನ್ ಅವರು ಜಗದೀಶ್ ಶೆಟ್ಟರ್ ಅವರ ಮನೆಗೆ ಆಗಮಿಸಿ, ಶೆಟ್ಟರ್ ಮನವೊಲಿಕೆಗೆ ಯತ್ನಿಸಿದ್ದರೂ ಅವರು ರಾಜಿಯಾಗದ ಕಾರಣ ಬಿಜೆಪಿ ನಾಯಕರ ಸಂಧಾನ ಸಭೆ ವಿಫಲವಾಗಿತ್ತು. 

ಶೆಟ್ಟರ್ ಅವರ ಮನವೊಲಿಸಲು ನಡೆಸಿದ ಸಂಧಾನ ಸಭೆ ವಿಫಲವಾದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ  ಶೆಟ್ಟರ್, ಪಕ್ಷ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ನನ್ನ 30 ವರ್ಷ ರಾಜಕಾರಣದಲ್ಲಿ ಕಳೆದ 3 ತಿಂಗಳು ಮಾತ್ರ ಅತ್ಯಂತ ಕೆಟ್ಡ ದಿನವಾಗಿತ್ತು. ನಾನು ರಾಜ್ಯದ ಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ಕೆಳ ಮಟ್ಟದಿಂದ ಇಲ್ಲಿಯವರೆಗೂ ಕಟ್ಟಿದ್ದೇನೆ. ಹೀಗಾಗಿ ಪಕ್ಷಕ್ಕೆ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ, ಸಂಘಟಿಸುವುದಕ್ಕೆ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಮೇಲೆ ಈ ವರೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಆಗಲಿ, ಇನ್ನಿತರ ಆರೋಪವಾಗಲಿ ಇಲ್ಲ. ಸೆಕ್ಸ್‌ ಸಿಡಿಯ ಆರೋಪವೂ ಇಲ್ಲ. ಹೈಕಮಾಂಡ್ ನಡೆಸಿದ ಸರ್ವೆ ವರದಿಯೂ ಸಹ ನನ್ನ ಪರವಾಗಿ ಬಂದಿದ್ದು, ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ. ನಾನೊಬ್ಬ ಪಕ್ಷದ  ಶಿಸ್ತಿನ ರಾಜಕಾರಣಿಯಾದರೂ ಟಿಕೆಟ್ ಘೋಷಿಸಿಲ್ಲ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.

ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ. ರವಿವಾರ ಬೆಳಗ್ಗೆಯೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದ ಜಗದೀಶ್ ಶೆಟ್ಟರ್,  ರಾಜ್ಯದಲ್ಲಿ ಲಿಂಗಾಯತ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು  ಗಂಭೀರ ಆರೋಪ ಮಾಡಿದರು.

Ads on article

Advertise in articles 1

advertising articles 2

Advertise under the article