ಚೆನ್ನೈ ಸೂಪರ್ ಕಿಂಗ್ಸ್'ನ್ನು ಗೆಲ್ಲಿಸಿದ್ದು ಬಿಜೆಪಿ ಕಾರ್ಯಕರ್ತ ಜಡೇಜಾ: ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
ಚೆನ್ನೈ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ (IPL) ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲ್ಲಿಸಿದ್ದು ಬಿಜೆಪಿ ಕಾರ್ಯಕರ್ತ ರವೀಂದ್ರ ಜಡೇಜಾ ಎಂದು ಹೇಳುವ ಮೂಲಕ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಸುದ್ದಿಯಾಗಿದ್ದಾರೆ.
ಈ ಗೆಲುವಿನ ಮೂಲಕ ಜಡೇಜಾ ಹೆಚ್ಚಿನ ಸಂಖ್ಯೆಯ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಸರಿಗಟ್ಟಲು ಸಹಾಯ ಮಾಡಿದರು ಎಂದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಣ್ಣಾಮಲೈ ಈ ಮಾತು ಹೇಳಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿತು. ಕೊನೆಯ ಎರಡು ಎಸೆತದಲ್ಲಿ 10 ರನ್ಗಳ ಅಗತ್ಯವಿದ್ದಾಗ ಆಲ್‌ರೌಂಡರ್ ರವೀಂದ್ರ ಜಡೇಜಾ ಒಂದು ಸಿಕ್ಸ್, ಒಂದು ಬೌಂಡರಿ ಹೊಡೆದು ಪಂದ್ಯ ಗೆಲ್ಲಿಸಿದ್ದರು.
ಜಡೇಜಾ ಬಿಜೆಪಿ ಕಾರ್ಯಕರ್ತರು. ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿ ನನಗೂ ಹೆಮ್ಮೆ ಇದೆ. ಸಿಎಸ್‌ಕೆಗಿಂತ GTಯಲ್ಲಿ ಹೆಚ್ಚು ತಮಿಳು ಜನರಿದ್ದರು. ನಾನು ಅದನ್ನು ಸಂಭ್ರಮಿಸುತ್ತೇನೆ. ಸಿಎಸ್‌ಕೆ ಗೆಲುವು ಗುಜರಾತ್ ಮಾಡೆಲ್ ಮೇಲೆ ದ್ರಾವಿಡ ಮಾಡೆಲ್ನ ವಿಜಯ ಎಂದು ಅಣ್ಣಾಮಲೈ ಹೇಳಿದ್ದಾರೆ.
ಅದೇ ವೇಳೆ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಮತ್ತೊಬ್ಬ ತಮಿಳಿನ ಸಾಯಿ ಸುದರ್ಶನ್ ಅವರನ್ನೂ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರು ಶ್ಲಾಘಿಸಿದ್ದಾರೆ. 96 ರನ್ ಗಳಿಸಿದ ತಮಿಳಿಗ ಸುದರ್ಶನ್, ನಾವು ಅದನ್ನು ಸಹ ಸಂಭ್ರಮಿಸುತ್ತೇವೆ. ಸಿಎಸ್‌ಕೆಯಲ್ಲಿ ಒಬ್ಬ ತಮಿಳಿಗನೂ ಆಡಿಲ್ಲ. ಆದರೆ ಎಂಎಸ್ ಧೋನಿಯಿಂದಾಗಿ ನಾವು ಇನ್ನೂ CSK ಗೆಲುವನ್ನು ಸಂಭ್ರಮಿಸುತ್ತೇವೆ. ಗೆಲುವಿನ ರನ್ ದಾಖಲಿಸಿದ್ದು ಬಿಜೆಪಿ ಕಾರ್ಯಕರ್ತ ಎಂಬುದಕ್ಕೆ ಹೆಮ್ಮೆ ಇದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಜಡೇಜಾ ಬಿಜೆಪಿ ಬೆಂಬಲಿಗರಾಗಿದ್ದರೂ ಅವರು ಬಿಜೆಪಿ ಸದಸ್ಯರಾಗಿದ್ದಾರೆಯೇ ಎಂಬುದು ಗೊತ್ತಿಲ್ಲ. ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್‌ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕಿ ಆಗಿದ್ದಾರೆ. ರಿವಾಬಾ 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 2022 ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 80,000 ಮತಗಳ ಅಂತರದಿಂದ ಗೆದ್ದಿದ್ದರು.