ಸುರತ್ಕಲ್'ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಭರ್ಜರಿ ರೋಡ್ ಶೋ; ಕ್ಷೇತ್ರದಲ್ಲಿ ಹವಾ ಎಬ್ಬಿಸಿದ ಕಾಂಗ್ರೆಸ್; ಸಹಸ್ರರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿ: ಮೊಳಗಿದ ಅಲಿ ಪರ ಜಯಕಾರದ ಘೋಷಣೆ
ಸುರತ್ಕಲ್(Headlines Kannada): ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಇಂದು ಸುರತ್ಕಲಿನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸಾರಥ್ಯದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ನಡೆಸುವ ಮೂಲಕ ತನ್ನ ಎದುರಾಳಿಗಳಿಗೆ ಠಕ್ಕರ್ ನೀಡಿದ್ದಾರೆ.
ಇನಾಯತ್ ಅಲಿ ಅವರ ಈ ಚುನಾವಣಾ ಪ್ರಚಾರದ ರೋಡ್ ಶೋಗೆ ಜನಸಾಗರವೇ ಹರಿದುಬಂದಿದ್ದು, ಇನಾಯತ್ ಅಲಿ, ಕಾಂಗ್ರೆಸ್ ಪರ ಘೋಷಣೆಗಳು ಮೊಳಗಿದವು.
ರೋಡ್ ಶೋ ಬಳಿಕ ನಡೆದ ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಆಲೋಚನೆ ಮಾಡಿ ತಳವರ್ಗದ ಕಾರ್ಯಕರ್ತನಾಗಿರುವ ಇನಾಯತ್ ಅಲಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸಿದ್ದಾರೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ಮತದಾರ ಬಾಂಧವರು ಮತ್ತು ಕಾರ್ಯಕರ್ತರದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರನಿಗೂ ಇನಾಯತ್ ಪರ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಸರಕಾರ ಬಂದರೆ ಈಗಾಗಲೇ ಗ್ಯಾರಂಟಿ ಕಾರ್ಡ್ ನಲ್ಲಿ ಹೇಳಿರುವ ಎಲ್ಲಾ ಗ್ಯಾರಂಟಿಗಳ ಜೊತೆ ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಗುಣಮಟ್ಟದ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಮಾತನಾಡಿ, ಹಣ ಕೊಟ್ಟು ಟಿಕೆಟ್ ತಗೊಂಡು ಬಂದಿದ್ದಾಗಿ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕುರಿತು ಯಾವುದೇ ದೇವಸ್ಥಾನ, ಮಸೀದಿ, ಚರ್ಚ್ ನಲ್ಲಿ ಬೇಕಿದ್ದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಹಾಗೊಂದು ವೇಳೆ ನಿಜವೇ ಆದಲ್ಲಿ ಪುರಾವೆಯನ್ನು ಬಹಿರಂಗಪಡಿಸಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ತನ್ನ ಎದುರಾಳಿಗಳಿಗೆ ಸವಾಲು ಹಾಕಿದರು.
ನಾನು ರಾಜಕೀಯ ಮಾಡುವ ಉದ್ದೇಶದಿಂದ ಚುನಾವಣೆಗೆ ನಿಂತಿಲ್ಲ, ಮಂಗಳೂರು ಉತ್ತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದ ಇನಾಯತ್ ಅಲಿ, ಒಂದು ವೇಳೆ ಚುನಾವಣೆಯಲ್ಲಿ ಮತದಾರರು ಆಶೀರ್ವದಿಸಿದರೆ ಜಯಗಳಿಸಿದ ತಿಂಗಳ ಒಳಗಾಗಿ ಸುರತ್ಕಲ್ ಪೇಟೆಯಲ್ಲಿ ಅರ್ಧದಲ್ಲಿ ನಿಲ್ಲಿಸಿರುವ ಬೃಹತ್ ಮಾರುಕಟ್ಟೆಯ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದು ಭರವಸೆ ನೀಡಿದರು.
ಸಮಾವೇಶದಲ್ಲಿ ರಾಜ್ಯಸಭಾ ಸದಸ್ಯ ರಮೇಶ್ ಚನ್ನಿತ್ತಲ್ಲಿ, ಮಂಜೇಶ್ವರ ಶಾಸಕ ಎಕೆ ಅಶ್ರಫ್, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಮಾಜಿ ಮೇಯರ್ಗಳಾದ ಕವಿತಾ ಸನಿಲ್, ಗುಲ್ಜಾರ್ ಬಾನು, ಶಶಿಧರ ಹೆಗಡೆ, ಹರಿನಾಥ್, ಮಹಾಬಲ ಮಾರ್ಲ, ಮಾಜಿ ಉಪಮೇಯ ಪುರುಷೋತ್ತಮ ಚಿತ್ರಾಪುರ, ಬಶೀರ್ ಬೈಕಂಪಾಡಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಲ್ಲಾ ಕಾಂಗ್ರೆಸ್ ನ ಸಂತೋಷ್ ಕುಮಾರ್ ಸತ್ತಾರ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕೂಳಾಯಿ, ಸುಂದರ ಶೆಟ್ಟಿ, ನಾಗವೇಣಿ, ಕಾಂಗ್ರೆಸ್ನ ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಗಿರೀಶ್ ಆಳ್ವ, ಆರ್.ಕೆ. ಪ್ರಥ್ವಿರಾಜ್, ಸಮೀರ್ ಕಾಟಿಪಳ್ಳ ಹಾಗೂ ಪ್ರಮುಖ ಉಪಸ್ಥಿತರಿ ದ್ದರು. ಕಾರ್ಯಕ್ರಮವನ್ನು ರಹ್ಮಾನ್ ಕುಂಜತ್ತಬೈಲ್ ನಿರೂಪಿಸಿದರು.
ಇದಕ್ಕೋ ಮೊದಲು ಚೊಕ್ಕಬೆಟ್ಟು ಕ್ರಾಸ್ ನಿಂದ ಅದ್ದೂರಿ ರೋಡ್ ಶೋ ನಡೆಯಿತು. ರೋಡ್ ಶೋ ನಲ್ಲಿ ಬ್ಯಾಂಡ್, ಚಂಡೆ ಕುಣಿತ ಏರ್ಪಡಿಸಲಾಗಿತ್ತು. ಜಾಥಾದಲ್ಲಿ ಭಾಗವಹಿಸಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.