ಕಾಂಗ್ರೆಸ್ ಈ ಜನ್ಮದಲ್ಲಿ ಅಧಿಕಾರಕ್ಕೆ ಬರುವುದಿಲ್ಲ: ಹಿರಿಯಡ್ಕದಲ್ಲಿ ನಡೆದ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ
ಹಿರಿಯಡ್ಕ: ಕಾಂಗ್ರೆಸ್ ಈ ಜನ್ಮದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವನ್ನು ಕಂಡು ಬೇಸತ್ತು ಜನರು, ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ಜನರ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದ್ದಾರೆ.
ಅವರು ಸೋಮವಾರ ಸಂಜೆ ಹಿರಿಯಡ್ಕದಲ್ಲಿ ನಡೆದ ಬಿಜೆಪಿಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಲವು ಹಗರಣಗಳಾದವು. ಆದರೆ ನರೇಂದ್ರ ಮೋದಿಯವರು ಈ ದೇಶದ ಚುಕ್ಕಾಣಿ ಹಿಡಿದ ಬಳಿಕ ಯಾವುದೇ ಒಂದು ಹಗರಣ ನಡೆದಿದೆ ಎಂದು ಸಾಕ್ಷ್ಯ ನೀಡಲು ಕಾಂಗ್ರೆಸ್ ಗೆ ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು.
ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಒಂದು ಅವಕಾಶ ಕೊಡಿ. ಈ ದೇಶ ವಿಶ್ವಗುರು ಮಾಡುವಲ್ಲಿ ನನ್ನ ಅಳಿಲು ಸೇವೆಯನ್ನು ಮಾಡುತ್ತೇನೆ. ಗೆಲ್ಲುವುದು ಗುರ್ಮೆ ಸುರೇಶ್ ಶೆಟ್ಟಿ ಅಲ್ಲ, ನಮ್ಮ ಧರ್ಮ, ಸಂಸ್ಕಾರ ಗೆಲ್ಲಬೇಕು. ಮೋದಿಯವರ ಸಂಕಲ್ಪ ಗೆಲ್ಲಬೇಕು. ಮೂರು ಸಾವಿರ ಕೋ. ರೂ ಮಿಕ್ಕಿ ಅನುದಾನವನ್ನು ಲಾಲಾಜಿಯವರು ತಂದಿದ್ದಾರೆ. ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ದೇವರು ಕೊಟ್ಟದರಲ್ಲಿ ತೃಪ್ತನಿದ್ದೇನೆ. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಕಾಪು ಕ್ಷೇತ್ರ ಮಾದರಿ ಕ್ಷೇತ್ರ ಆಗಲು, ನನ್ನ ಕೈಗಳಿಗೆ, ತೋಳುಗಳಿಗೆ ಬಲ ನೀಡಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಾಲಾಜಿ ಆರ್ ಮೆಂಡನ್, ಈ ಬಾರಿಯ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆಯವರು ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ಬಾರಿ ತಾವೆಲ್ಲಾ ಸೇರಿ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ವಿನಂತಿಸಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮುಖಂಡರಾದ ರವಿ ಆಮೀನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ಸಂದೀಪ್ ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಪ್ರ.ಕಾರ್ಯದರ್ಶಿ ಅನಿಲ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.