ಎಲ್ಲವನ್ನು ಮಾರಾಟ ಮಾಡುತ್ತಿರುವ ಬಿಜೆಪಿ ಮುಂದೊಂದು ದಿನ ಮಲ್ಪೆ ಬಂದರನ್ನೂ ಅದಾನಿ, ಅಂಬಾನಿಗೆ ಮಾರಲಿದೆ: ಕಳವಳ ವ್ಯಕ್ತಪಡಿಸಿದ ನಿಕೇತ್ ರಾಜ್ ಮೌರ್ಯ
ಉಡುಪಿ: ಇಂದು ತಳ ಸಮುದಾಯದ ಮಕ್ಕಳು ಉನ್ನತ ಹುದ್ದೆಯನ್ನಲಂಕರಿಸುತ್ತಿದ್ದಾರೆ ಎಂದರೆ ಅದು ಸಂವಿಧಾನದ ಕೊಡುಗೆ. ಕಾಂಗ್ರೆಸ್ ಉಳಿದರೆ ಸಂವಿಧಾನ ಉಳಿಯುತ್ತದೆ. ಬಿಜೆಪಿ ಸರಕಾರ ಒಂದು ದಿನ ಮಲ್ಪೆ ಬಂದರನ್ನು ಅದಾನಿ, ಅಂಬಾನಿಗೆ ಮಾರಲಿದೆ ಎಂದು ಯುವನಾಯಕ ನಿಕೇತ್ ರಾಜ್ ಮೌರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಅವರು ರವಿವಾರ ಉಡುಪಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ರಾಲಿಯ ನಂತರ ಕಲ್ಮಾಡಿ ಚರ್ಚ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದರು.
ಈಗಿನ ಸರಕಾರ ಕೊರೋನ ಸಂದರ್ಭದಲ್ಲೂ ಆಂಬ್ಯುಲೆನ್ಸ್ ಮೇಲೆ 14 % ತೆರಿಗೆಯನ್ನು ವಿಧಿಸಿತ್ತು. ಮೊಟ್ಟೆ, ವಿಮೆ ಎಲ್ಲದಕ್ಕೂ ತೆರಿಗೆಯನ್ನು ವಿಧಿಸಿದೆ. ಕಾಂಗ್ರೆಸ್ ಬದುಕಿನ ಬಗ್ಗೆ ಮಾತನಾಡುತ್ತಿದೆ. ಉನ್ನತ ವ್ಯಾಸಂಗ ಮಾಡಿದ ನಿರುದ್ಯೋಗಿ ಯುವಕರಿಗೆ ಸಹಕಾರಿಯಾಗಲು. ನಿರುದ್ಯೋಗಿ ಯುವಕರ ಆತ್ಮಹತ್ಯೆ ತಡೆಯಲು ಯುವನಿಧಿಯ 3000 ರೂ. ಗಳ ಗ್ಯಾರಂಟಿ ಕೊಡಲಾಗಿದೆ. ದೇಶದಲ್ಲಿ 1 ಲಕ್ಷದ 64 ಸಾವಿರ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರ್ಚೇಸಿಂಗ್ ಪವರ್ ಹೆಚ್ಚಾದರೆ ದೇಶದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ ಎಂದರ್ಥ. ಇಂದು ಅವಿದ್ಯಾವಂತರು ದೇಶವನ್ನಾಳುತ್ತಿದ್ದಾರೆ. ವಿದ್ಯಾವಂತರು ನಿರುದ್ಯೋಗಿಯಾಗಿ ಮನೆಯಲ್ಲಿದ್ದಾರೆ. 40% ಕಥೆಯನ್ನು ಅಂತ್ಯಗೊಳಿಸೋಣ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಕೇರಳ ಸಂಸದ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕೆಪಿಸಿಸಿ ವಕ್ತಾರೆ ವೆರೋನಿಕ, ಎನ್.ಎಸ್.ಯು.ಐ ಉಪಾಧ್ಯಕ್ಷ ಶರತ್ ಮೊದಲಾದವರು ಉಪಸ್ಥಿತರಿದ್ದರು.