ಜಯನಗರದಲ್ಲಿ ಬಿಜೆಪಿಯ ಕೆ.ಸಿ.ರಾಮಮೂರ್ತಿ 16 ಮತಗಳ ಅಂತರದ ಗೆಲುವು; ಫಲಿತಾಂಶದ ವಿರುದ್ಧ ಕಾನೂನು ಹೋರಾಟ: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ
ಬೆಂಗಳೂರು: ತೀವ್ರ ರೋಚಕ ಫಲಿತಾಂಶಕ್ಕೆ ಕಾರಣವಾದ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸಿ. ರಾಮಮೂರ್ತಿ 16 ಮತಗಳ ಅಂತರದಿಂದ ಗೆದ್ದಿರುವುದಾಗಿ ಚುನಾವಣಾಧಿಕಾರಿಗಳು ಪ್ರಕಟಿಸಿದ್ದಾರೆ. ಆದರೆ, ಈ ಫಲಿತಾಂಶದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸೋತ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ.
ಮೊದಲ ಬಾರಿಗೆ ಮತ ಎಣಿಕೆ ನಡೆದಾಗ 160 ಮತಗಳಿಂದ ಗೆದ್ದಿರುವುದಾಗಿ ಘೋಷಿಸಲಾಗಿತ್ತು. ಆದರೆ ತದನಂತರ ಸಂಸದ ತೇಜಸ್ವಿ ಸೂರ್ಯ, ಆರ್. ಅಶೋಕ್ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿ ಅಕ್ರಮ ನಡೆಸಿದ್ದು, ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ ಕ್ಷೇತ್ರದಲ್ಲಿ ಮತ ಎಣಿಕೆಯು ಮೊದಲ ಸುತ್ತಿನಿಂದಲೂ ಹಾವು-ಏಣಿಯಾಟ ನಡೆಯುತ್ತಲೇ ಇತ್ತು. 16 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ 294 ಮತಗಳಿಂದ ಮುನ್ನಡೆ ಸಾಧಿಸಿರುವುದನ್ನು ಚುನಾವಣಾ ಫಲಿತಾಂಶದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು.ನಂತರ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯಿಸಿದರು.
ಒಟ್ಟು ಮೂರು ಬಾರಿ ಮರು ಎಣಿಕೆ ಮಾಡಲಾಯಿತು. ನಾಲ್ಕು ಬಾರಿ ಮತ್ತೆ ಮತ್ತೆ ಎಣಿಸಿದರೂ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆದ್ದಿರುವುದಾಗಿ ಚುನಾವಣಾಧಿಕಾರಿಗಳು ಪ್ರಕಟಿಸಿದರು.