ಭಜರಂಗದಳ ಬ್ಯಾನ್ ಮೂಲಕ ಕಾಂಗ್ರೆಸ್ ರಾಷ್ಟ್ರ ಭಕ್ತಿ ನಿಷೇಧಿಸುತ್ತದೆಯೇ ?: ಸುನಿಲ್ ಕುಮಾರ್ ಕಿಡಿ
ಮಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರ ಪ್ರಸ್ತಾಪವಾಗಿರುವುದು ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದು, ಇಂಧನ ಸಚಿವ ವಿ.ಸುನಿಲ್ ಕುಮಾರ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಜರಂಗದಳ ನಿಷೇಧದ ಮೂಲಕ ರಾಷ್ಟ್ರಭಕ್ತಿಯ ನಿಷೇಧಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಪ್ರಸ್ತಾಪ ಮಾಡುವ ಮೂಲಕ ಕಾಂಗ್ರೆಸ್ ಹಿಂದು ಭಾವನೆಯನ್ನು ಕೆಣಕಿದೆ. ಇದು ಕಾಂಗ್ರೆಸ್ ನಾಯಕರ ಮಾನಸಿಕತೆಯನ್ನು ತೋರಿಸುತ್ತದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯನ್ನು ಇದೇ ಡಿ.ಕೆ.ಶಿವಕುಮಾರ್ ಈ ಹಿಂದೆ ಅಮಾಯಕ ಎಂದು ಸರ್ಟಿಫಿಕೇಟ್ ನೀಡಿದ್ದರು. ಪಿಎಫ್ಐ ಅವರ ಅಟ್ಟಹಾಸದಿಂದ ಮನೆ ಕಳೆದುಕೊಂಡ ದಲಿತ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿತು. ಕೇಸರಿ ಬಣ್ಣ ಕಂಡರೆ ನನಗೆ ಅಲರ್ಜಿ ಎಂದು ಸಿದ್ದರಾಮಯ್ಯ ದ್ವೇಷ ಕಾರಿದರು. ಮಲ್ಲಿಕಾರ್ಜುನ ಖರ್ಗೆ ಹಣೆಗೆ ಇಟ್ಟ ತಿಲಕವನ್ನು ಒರೆಸಿಕೊಂಡರು. ಸತೀಶ್ ಜಾರಕಿಹೊಳಿ ಹಿಂದು ಪದವನ್ನು ಅಶ್ಲೀಲ ಎಂದು ನಿಂದಿಸಿದರು. ಇದೇ ಮನಸ್ಥಿತಿಯವರು ಈಗ ಭಜರಂಗದಳ ನಿಷೇಧಕ್ಕೆ ಹೊರಟಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹಾಗೂ ಎಸ್ಡಿಪಿಐ ಒಂದೇ ನಾಣ್ಯದ ಎರಡು ಮುಖ. ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರವನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ. ಮಾನ್ಯ ಡಿಕೆಶಿ ಹಾಗೂ ಸಿದ್ದರಾಮಯ್ಯನವರೇ, ನಾವು ಪಿಎಫ್ಐ ನಿಷೇಧ ಮಾಡಿದ್ದೇವೆಂಬ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ? ನಿಮ್ಮ ಹಿಂದು ವಿರೋಧಿ ನಿಲುವಿಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಹಿಂದು ಸಮಾಜದ ರಕ್ಷಣೆಗಾಗಿ, ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ಧವಾಗಿರುವ ಕಾರ್ಯಕರ್ತರ ಪಡೆ. ಮುಸ್ಲಿಂ ಓಲೈಕೆಗಾಗಿ ಭಜರಂಗದಳ ನಿಷೇಧಿಸುತ್ತೇವೆಂಬ ದಾಷ್ಟ್ಯವೇ? ಎಂದು ಪ್ರಶ್ನಿಸಿದ್ದಾರೆ.
ಭಜರಂಗ ದಳ ಹಾಗೂ ಪಿಎಫ್ಐನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ಥವಾಗಿದೆ. ಪಿಎಫ್ಐ ಒಂದು ಭಯೋತ್ಪಾದಕ ಸಂಘಟನೆ ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೇವೆ.
ಭಜರಂಗದಳ ಹಿಂದು ಸಮಾಜ ಮತ್ತು ದೇಶ ಹಿತದ ಸಂಘಟನೆ. ಹಾಗಾದರೆ ದೇಶಪ್ರೇಮವನ್ನು ಕಾಂಗ್ರೆಸ್ ನಿಷೇಧಿಸುತ್ತದೆಯೇ? ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಪಿಎಫ್ಐ ಮೇಲೆ ವಿಧಿಸಿದ್ದ ಪ್ರಕರಣ ಕೈ ಬಿಟ್ಟಿದ್ದರು. ಅದೇ ಪಿಎಫ್ ಐ ಕಾರ್ಯಕರ್ತರು ಮುಂದೆ ಕೆಜಿಹಳ್ಳಿ , ಡಿಜೆಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಾಂಗ್ರೆಸ್ನ ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದರು. ಆದರೆ ಕಾಂಗ್ರೆಸ್ ಆ ಬಗ್ಗೆ ಮಾತೇ ಆಡಲಿಲ್ಲ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿದಾಗ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರೇ ಸುಪ್ರೀಂ ಕೋರ್ಟ್ ನಲ್ಲಿ ಪಿಎಫ್ಐ ಪರ ವಾದ ಮಾಡಿದ್ದನ್ನು ದೇಶದ ಜನ ಮರೆತಿಲ್ಲ. ಈಗ ಚುನಾವಣಾ ಹೊಸ್ತಿಲಲ್ಲಿ ಭಜರಂಗದಳವನ್ನು ನಿಷೇಧಿಸುವ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಕಾಂಗ್ರೆಸ್ ನ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಹಿಂದುಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಿಎಫ್ಐ ಸಂಘಟನೆಯನ್ನು ಬಿಜೆಪಿ ಸರ್ಕಾರ ಈಗಾಗಲೇ ನಿಷೇಧಿಸಿದೆ. ನೀವು ಅಧಿಕಾರದಲ್ಲಿ ಇದ್ದಾಗ ಹಿಂದು ಕಾರ್ಯಕರ್ತರ ಸರಣಿ ಕೊಲೆ ನಡೆಸುತ್ತಿದ್ದಾಗ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಗೆ ಪಿಎಫ್ಐ ನಿಷೇಧಿಸಬೇಕೆಂಬ ಯೋಚನೆ ಏಕೆ ಬರಲಿಲ್ಲ? ಈಗ ಭಜರಂಗದಳ ಹಾಗೂ ಹಿಂದು ಸಂಘಟನೆಯನ್ನು ನಿಷೇಧಿಸುವುದಕ್ಕಾಗಿ ಈ ತಂತ್ರವೇ? ಹಾಗಾದರೆ ಅಧಿಕಾರಕ್ಕೆ ಬಂದಾಗ ಎಸ್ ಡಿಪಿಐ ನಿಷೇಧಿಸುತ್ತೇವೆ ಎಂದು ಘೋಷಿಸಿ ಎಂದು ಸವಾಲು ಹಾಕಿದ್ದಾರೆ.
ಅಸಂವಿಧಾನಿಕ ಮುಸ್ಲಿಂ ಮೀಸಲಾತಿಯನ್ನು ಮತ್ತೆ ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಈಗಾಗಲೇ ಹೇಳಿದೆ. ಜತೆಗೆ ಮತಾಂತರ ನಿಷೇಧ ಕಾಯಿದೆ ಹಾಗೂ ಗೋಹತ್ಯೆ ನಿಷೇಧ ಕಾಯಿದೆ ರದ್ದು ಮಾಡುತ್ತೇವೆ ಎಂದಿದ್ದಾರೆ. ಈಗ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಪ್ರಸ್ತಾಪವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಗಳ ಸ್ಥಿತಿ ಏನಾಗಬಹುದೆಂದು ಈಗಲೇ ಊಹಿಸಬಹುದು. ಹೀಗಾಗಿ ಹಿಂದು ವಿರೋಧಿ ಕಾಂಗ್ರೆಸ್ ಅನ್ನು ನೆಲಕಚ್ಚಿಸಬೇಕು. ಈ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಅನ್ನು ತಿರಸ್ಕರಿಸಬೇಕು ಎಂದು ಸುನಿಲ್ ಕುಮಾರ್ ಕರೆ ನೀಡಿದ್ದಾರೆ.