ಶಿವಮೊಗ್ಗದ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ 3 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಬಂಧನ
ಶಿವಮೊಗ್ಗ: ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ 3 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ವಿಘ್ನರಾಜ್, ಪಾಂಡಿದೊರೈ ಮತ್ತು ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ಮೂವರು ವಿದ್ಯಾರ್ಥಿಗಳು ಮನೆಯಲ್ಲೆ ಹೈಟೆಕ್ ಫಾರ್ಮಿಂಗ್ ಮೂಲಕ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ.
ಮನೆ ಮಾಲಕರ ಗಮನಕ್ಕೆ ಬಾರದಂತೆ ಮನೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ (ಸ್ಪೈಡರ್ ಫಾರ್ಮಿಂಗ್) ಪಾಟ್ಗಳಲ್ಲಿ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೂರುವರೆ ವರ್ಷದಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆನ್ನಲಾಗಿದ್ದು, ಇದರಲ್ಲಿ ಇನ್ನು ಭಾಗಿಯಾಗಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳಿಂದ 227 ಗ್ರಾಂ ಗಾಂಜಾ, 1.53 ಕೆಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳಿದ್ದ ಚಿಕ್ಕ ಬಾಟಲ್, 3 ಕೆನಾಬಿಲ್ ಆಯಿಲ್ ಸಿರಂಜ್, ಗಾಂಜಾಪುಡಿ ಮಾಡಲು ಬಳಸುತ್ತಿದ್ದ ಎರಡು ಡಬ್ಬಿಗಳು, 1 ಇಲೆಕ್ಟ್ರಾನಿಕ್ ತೂಕದ ಯಂತ್ರ, 1 ಎಕ್ಸಿಟ್ ಫ್ಯಾನ್, 6 ಟೇಬಲ್ ಫ್ಯಾನ್, 2 ಸ್ಟೆಬಲೈಸರ್, 3 ಎಲ್ಇಡಿ ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ, 4 ಹುಕ್ಕಾ ಕ್ಯಾಪ್, ಗಾಂಜಾ ಗಿಡದ ಕಾಂಡ, 19 ಸಾವಿರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.