ಎರಡೂ ಕ್ಷೇತ್ರದಲ್ಲಿ ಸೋತು ಈಗ ನಿರುದ್ಯೋಗಿ ಆಗಿ ಮನೆಯಲ್ಲಿ ಕುಳಿತಿದ್ದೇನೆ; ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುವೆ: ಸೋಮಣ್ಣ
ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿಕ ಬಳಿಕ ಮಾಜಿ ಸಚಿವ ವಿ ಸೋಮಣ್ಣ ಅವರು ಇದೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ರವಿವಾರ ರಾಜ್ಯ ಬಿಜೆಪಿಯ ಕಾನೂನು ಪ್ರಕೋಷ್ಠ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಪಕ್ಷದ ಕಚೇರಿಗೆ ಆಗಮಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋಮಣ್ಣ, ಚುನಾವಣೆ ಸೋಲಿನ ಬಳಿಕ ಮೊದಲ ಬಾರಿ ಕಚೇರಿಗೆ ಬಂದಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ನಂಬಿದವನು ನಾನು. ಗೋವಿಂದರಾಜನಗರದಲ್ಲಿ 480 ಕೋಟಿ ರೂ.ಗೂ ಹೆಚ್ಚಿನ ಕೆಲಸ ಮಾಡಿರುವೆ. ಆಸ್ಪತ್ರೆ, ಶಾಲೆ, ಕಾಲೇಜು ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮನೆಯಲ್ಲಿ ಆರಾಮಾಗಿ ಮಲಗಿದ್ದರೂ ಗೆಲ್ಲುತ್ತಿದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ. ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಎರಡರಲ್ಲೂ ಸೋತು ಈಗ ನಿರುದ್ಯೋಗಿ ಆಗಿ ಮನೆಯಲ್ಲಿ ಕುಳಿತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿ, ನಾನು ಹೈಕಮಾಂಡ್ ಬಳಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ನನಗೆ ಇತಿಮಿತಿ ಇದೆ. ಫೋರ್ ಸಿಕ್ಸ್ ಎಲ್ಲ ಇಲ್ಲೆ ಹೊಡೆಯುತ್ತೇನೆ ಅಂತ ಹೇಳಿದ್ದೇನೆ. ಈಗ ಬೋಲ್ಡ್ ಕೂಡ ಆಗಿದ್ದೇನೆ. ಪಕ್ಷ ಕೊಡುವ ಸಂದೇಶದ ಪ್ರಕಾರ ಕೆಲಸ ಮಾಡುತ್ತೇನೆ. ಡಬಲ್ ಸ್ಟ್ಯಾಂಡರ್ಡ್ ನನಗೆ ಇಲ್ಲ. ಎಲ್ಲ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಗೆ ಬಂದು ಎಂತೆಂತಹ ಸಂದರ್ಭದಲ್ಲೂ ಕೆಲಸ ಮಾಡಿದ್ದೇನೆ. ಈಗಲೂ ಅವಕಾಶ ಕೊಟ್ಟರೆ ಮಾಡುತ್ತೇನೆ ಎಂದು ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಇಂಗಿತ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷರ ಶ್ರಮ ಪಕ್ಷದ ಏಳಿಗೆಗೆ ಇದೆ. ನಳಿನ್ ಕುಮಾರ್ ಕಟೀಲ್ ಪಕ್ಷದ ಶ್ರಮಜೀವಿ. ಅವರು ವಿಧಾನಸಭೆ ಸೋಲಿನ ಹೊಣೆ ಹೊತ್ತಿದ್ದಾರೆ. ಅವರು ದೂರದೃಷ್ಟಿ ಇರುವ ವ್ಯಕ್ತಿ. ಕೆಲಸ ಮಾಡಲು ಅವಕಾಶ ಕೇಳಿದ್ದೇನೆ. ನನಗಿಂತ ಬುದ್ದಿವಂತರು ಇದ್ದರೆ ಅವರಿಗೆ ಅವಕಾಶ ಕೊಡಲಿ. ನಾನು ನಿದ್ದೆ ಮಾಡುವವನಲ್ಲ, ನಿದ್ದೆ ಮಾಡಲು ಬಿಡುವವನೂ ಅಲ್ಲ. ಹಿಂದೆ ಮುಂದೆ ಮಾತಾಡುವವರ ನೀತಿಪಾಠ ಗೊತ್ತು. ನಾನು ಕೇವಲ ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.
ಕಾನೂನು ವಿಚಾರದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿರುತ್ತೆ. ಸಂವಿಧಾನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಕೊಡುಗೆ ಅಧಿಕಾರ ಇದ್ದಾಗ ಉತ್ತಮವಾಗಿ ನಡೆದುಕೊಳ್ಳುವುದು ಮುಖ್ಯ. 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು, ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಅರಿವು ಮೂಡಿಸಬೇಕು. ಕಾನೂನು ಹೋರಾಟ ನಡೆಸಲು ಸಾಧ್ಯವಾಗದೇ ಕೇಸ್ ಹಾಗೇ ಇವೆ. ಒಂದೊಂದು ಕೇಸ್ ತೆಗೆದುಕೊಂಡು ಬಡವರಿಗೆ ಸಹಾಯ ಮಾಡಿ ಎಂದು ಹೇಳಿದರು.
ಏನ್ ಆದ್ರೂ ನಮ್ಮೆಲ್ಲರಿಗೂ ಕಾನೂನೇ ದೊಡ್ಡದು. ರಾಜಕೀಯದಲ್ಲಿ ಅಧಿಕಾರ ಬಂದ ದಿನಗಳಲ್ಲಿ ಉತ್ತಮವಾಗಿ ನಡೆದುಕೊಳ್ಳುವುದು ಬಹಳ ಮುಖ್ಯ. ಹಳ್ಳಿ ಪ್ರದೇಶದ ಜನರಲ್ಲಿ ಕಾನೂನು ಅರಿವು ಮೂಡಿಸುವ ಕೆಲಸ ಆಗಬೇಕು. ಏಕೆಂದರೆ ಇನ್ನು ಹಳ್ಳಿಗಾಡಿನ ಜನರಿಗೆ ಕಾನೂನು ಅರಿವಿಲ್ಲ. ಸಾಕಷ್ಟು ವಿಚಾರಗಳಿಗೆ ಹಲವಾರು ಬಡ ಕುಟುಂಬಗಳು ಕಾನೂನು ಹೋರಾಟ ನಡೆಸಲು ಸಾಧ್ಯವಾಗದ ಸಾವಿರಾರು ಕೇಸ್ಗಳು ಹಾಗೇ ಇವೆ. ಅಂತಹ ಕೇಸ್ಗಳಲ್ಲಿ ಒಂದೊಂದು ಕೇಸ್ ತೆಗೆದುಕೊಂಡು ಬಡವರಿಗೆ ಸಹಾಯ ಮಾಡಿ ಎಂದು ತಿಳಿಸಿದರು.